ಬ್ಯಾಂಕ್ನಲ್ಲಿ ಕನ್ನಡಿಗರಿಗೆ ಉದ್ಯೋಗ; ಕೋರ್ಟ್ ಮಹತ್ವದ ಆದೇಶ

Vijayanagara Vani
ಬ್ಯಾಂಕ್ನಲ್ಲಿ ಕನ್ನಡಿಗರಿಗೆ ಉದ್ಯೋಗ; ಕೋರ್ಟ್ ಮಹತ್ವದ ಆದೇಶ

ಬೆಂಗಳೂರು, ಏಪ್ರಿಲ್ 24: ಕನ್ನಡಿಗರ ನೆಲ-ಜಲ ಪಡೆದು ಅವರಿಗೇ ಉದ್ಯೋಗ ನೀಡುವುದಿಲ್ಲ ಎಂದರೆ ಹೇಗೆ?, ಎಷ್ಟು ದಿನ ಈ ಅನ್ಯಾಯ ಸಹಿಸಲು ಸಾಧ್ಯ? ಎಂದು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಐಡಿಬಿಐ ಬ್ಯಾಂಕ್ ವಿಚಾರದಲ್ಲಿ ನ್ಯಾಯಾಲಯ ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸುವುದಿಲ್ಲ. ಕೇವಲ ‘ಸಿ’ ಹಾಗೂ ‘ಡಿ’ ವೃಂದದ ಉದ್ಯೊಗಗಳನ್ನು ಕನ್ನಡಿಗರಿಗೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಹಂತದ ಹುದ್ದೆಗಳಲ್ಲೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿದೆ.

ವಾಣಿಜ್ಯೋದ್ಯಮ ಆರಂಭಕ್ಕಾಗಿ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಮೀನು ಪಡೆದರೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಖಾಸಗಿ ಕಂಪನಿ ತೋರುವ ಅಸಡ್ಡೆಗೆ ಹೈಕೋರ್ಟ್‌ ಕೆಂಡಾಮಂಡಲವಾಗಿ ಬ್ಯಾಂಕ್ ವಿರುದ್ಧ ಕಿಡಿ ಕಾರಿದೆ

ಕಾಲ್ ಸೆಂಟರ್‌ ಸೇರಿದಂತೆ ವಿವಿಧ ಕೇಂದ್ರಗಳ ನಿರ್ಮಾಣಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾರ್ಡ್‌ವೇರ್ ಪಾರ್ಕ್‌ನಲ್ಲಿ 4 ಎಕರೆ ಜಮೀನು ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮ ಪ್ರಶ್ನಿಸಿ ಐಡಿಬಿಐ ಬ್ಯಾಂಕ್‌ ಸಲ್ಲಿಸಿದ್ದ ಮೇಲ್ಮನವಿ, ಮುಖ್ಯ ನ್ಯಾಯಮೂರ್ತಿ ಎನ್‌. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಪ್ರಮಾಣ ಪತ್ರ ಸಲ್ಲಿಕೆಗೆ ಸೂಚನೆ: ಕನ್ನಡಿಗರಿಗೆ ಉದ್ಯೋಗ ನೀಡಲು ಬ್ಯಾಂಕ್‌ ಹಿಂದೇಟು ಹಾಕಿರುವ ಅಂಶ ಗಮನಿಸಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ?. ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗಲಿದೆ. ಜವಾನ-ಝಾಡಮಾಲಿ ಅಂತಹ ಉದ್ಯೋಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡುವುದಲ್ಲ. ಎಲ್ಲಾ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು, ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಐಡಿಬಿಐ ಬ್ಯಾಂಕಿಗೆ ಸೂಚಿಸಿತು.

ಅಲ್ಲದೆ, ಕಾದಂಬರಿಕಾರ ಗಳಗನಾಥ ಅವರ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು, ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ. ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ. ಬ್ರಿಟಿಷ್‌ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ‘ಸಿ’ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವು ಸಹ ವರ್ತಿಸಬಾರದು ಎಂದು ಬ್ಯಾಂಕ್‌ ಪರ ವಕೀಲರಿಗೆ ಕಟುವಾಗಿ ತಾಕೀತು ಮಾಡಿದರು.

ಅಂತಿಮವಾಗಿ ಪ್ರಕರಣದಲ್ಲಿ ಭೂಮಿ ಹಂಚಿಕೆ ಮಾಡಿ ನೀಡಲಾಗಿದ್ದ ಮಂಜೂರಾತಿ ಪತ್ರ ರದ್ದುಪಡಿಸಿರುವ ವಿಚಾರ ಸಂಬಂಧ ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಪ್ರಕರಣದ ಹಿನ್ನೆಲೆ: ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೆಐಡಿಬಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಹಾರ್ಡ್‌ವೇರ್ ಪಾಕ್‌ರ್ನಲ್ಲಿ 4.5 ಎಕರೆಯನ್ನು ಐಡಿಬಿಐ ಬ್ಯಾಂಕಿಗೆ 2013ರ ಫೆ.15ರಂದು ಹಂಚಿಕೆ ಮಾಡಿತ್ತು.

ಬ್ಯಾಂಕಿನ ರೀಜಿನಲ್‌ ಪ್ರಾಸೆಸಿಂಗ್‌ ಯೂನಿಟ್‌, ಕರೆನ್ಸಿ ಚೆಸ್ಟ್‌ ಸೆಂಟರ್‌, ಕಾಲ್‌ ಸೆಂಟರ್‌, ಸಿಬ್ಬಂದಿ ವಸತಿ ನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಈ ಜಮೀನು ಹಂಚಿಕೆ ಮಾಡಿತ್ತು. ಎರಡು ವರ್ಷದಲ್ಲಿ ಯೋಜನೆ ಜಾರಿಗೆ ತರಬೇಕು. ವೈಯಕ್ತಿಕ ಅಧಿಕಾರಿ ಹುದ್ದೆಗೆ ಕನ್ನಡಿಗರನ್ನು ನೇಮಿಸಬೇಕು ಎಂಬುದಾಗಿ ಭೂಮಿ ಹಂಚಿಕೆಗೆ ಕೆಐಎಡಿಬಿ ಷರತ್ತು ವಿಧಿಸಿತ್ತು. 10 ವರ್ಷವಾದರೂ ಯೋಜನೆ ಜಾರಿ ಮಾಡದ ಹಿನ್ನೆಲೆಯಲ್ಲಿ ಭೂಮಿ ಹಂಚಿಕೆ ಪತ್ರ ರದ್ದುಪಡಿಸಿ 2023ರ ಜು.14ರಂದು ಕೆಐಎಡಿಬಿ ಆದೇಶಿಸಿತ್ತು. ಭೂಮಿ ಹಂಚಿಕೆ ಪತ್ರ ರದ್ದುಪಡಿಸಿದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಬ್ಯಾಂಕ್‌ ತಕರಾರು ಅರ್ಜಿ ಸಲ್ಲಿಸಿತ್ತು. ಅ ಅರ್ಜಿ ವಜಾಗೊಳಿಸಿ 2024ರ ಮಾ.6ರಂದು ಏಕ ಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಅಲ್ಲದೆ, ಇಡೀ ಯೋಜನೆಯಲ್ಲಿ ವೈಯಕ್ತಿಕ ಅಧಿಕಾರಿ ಹುದ್ದೆಯೊಂದಕ್ಕೆ ಕನ್ನಡಿಗರನ್ನು ನೇಮಕ ಮಾಡಬೇಕೆಂಬ ಷರತ್ತು ಪಾಲಿಸದಕ್ಕೆ ಏಕಸದಸ್ಯ ನ್ಯಾಯಪೀಠ ಗಂಭೀರ ಆಕ್ಷೇಪ ಎತ್ತಿತ್ತು. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬ್ಯಾಂಕ್‌ ಮೇಲ್ಮನವಿ ಸಲ್ಲಿಸಿದೆ.

WhatsApp Group Join Now
Telegram Group Join Now
Share This Article
error: Content is protected !!