ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ರವರ 116ನೇ ಹುತಾತ್ಮ ದಿನಾಚರಣೆ

Vijayanagara Vani
ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ರವರ 116ನೇ ಹುತಾತ್ಮ ದಿನಾಚರಣೆ
 ಬಳ್ಳಾರಿ ಆ 11 ಯಾರು ಯಾವುದೇ ಪ್ರೋತ್ಸಾಹ ಸಿಗದಿದ್ದರೂ ದೇಶದ ಒಳಿತಿಗಾಗಿ ದುಡಿಯುತ್ತಾರೋ, ಅವರೇ ನಿಜವಾದ ದೇಶಪ್ರೇಮಿಗಳು.” – ಖುದಿರಾಮ್ ಬೋಸ್._ 
“ಸ್ವಾತಂತ್ರ್ಯವನ್ನು ಸೈನಿಕನಂತೆ ಹೋರಾಡಿ ಪಡೆಯಬೇಕೇ ಹೊರತು ಬ್ರಿಟಿಷರನ್ನು ಓಲೈಸುತ್ತಾ ಭಿಕ್ಷೆಯ ರೂಪದಲ್ಲಲ್ಲ.”- ಖುದಿರಾಮ್ ಬೋಸ್
 AIDSO ವಿದ್ಯಾರ್ಥಿ ಸಂಘಟನೆಯಿಂದ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ರವರ 116ನೇ ಹುತಾತ್ಮ ದಿನಾಚರಣೆಯನ್ನು ವಿಮ್ಸ್, ಮುನಿಸಿಪಾಲ್ ಮೈದಾನ, ಸೊಂತ ಲಿಂಗಣ್ಣ ಕಾಲೋನಿ ಪಾರ್ಕ್ ನಲ್ಲಿ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ ಅವರು ಮಾತನಾಡುತ್ತಾ ತನ್ನ 18ನೇ ವಯಸ್ಸಿನಲ್ಲಿ ಬ್ರಿಟೀಷ್ ಸರ್ಕಾರದ ಕ್ರೂರ ದರ್ಪಕ್ಕೆ ಸೆಡ್ಡು ಹೊಡೆದು, ನಗು ನಗುತಾ ಗಲ್ಲಿಗೇರಿದ 19ರ ಹರೆಯದ ಬಾಲಕ ಖುದಿರಾಮ್ ಬೋಸ್!! ತಾನು ಬದುಕಿದ ಅಲ್ಪಾವಧಿಯಲ್ಲೇ ಬಂಗಾಳದ ತಾಯಂದಿರ ಮುದ್ದಿನ ಧೀರ ಮಗನಾದ ಈತ. ” ನನ್ನ ಮಗ ಖುದಿರಾಮ್ ನಂತೆ ಆಗಲಿ ಎಂದು ತಾಯಂದಿರು ಆಶಿಸುತ್ತಾ ಮನೆಗಳಲ್ಲಿ ಮಕ್ಕಳಿಗೆ ಅವನ ಹಾಡನ್ನು ಹಾಡುತ್ತಿದ್ದರು. ಬ್ರಿಟೀಷ್ ಅಧಿಪತ್ಯದ ರಾಜಿ ಇಲ್ಲದ ತನ್ನ ಹೋರಾಟದಿಂದಾಗಿ, ವಿದ್ಯಾರ್ಥಿಗಳ ಯುವಕರ ಮನದಲ್ಲಿ ಅಚ್ಚಳಿಯದ ಸ್ಫೂರ್ತಿಯಾದ ಖುದಿರಾಮ್!.. ಈ ಹರೆಯದ ಮಹಾನ್ ಕ್ರಾಂತಿಕಾರಿಯನ್ನು ಕುರಿತು ಮತ್ತೊಬ್ಬ ಬಂಗಾಳದ ಕ್ರಾಂತಿಕಾರಿ ಕವಿ ಖಾಜಿ ನಜರುಲ್ ಇಸ್ಲಾಂ ಅವರು ಹೀಗೆ ಬರೆದಿದ್ದಾರೆ’ ಏಕ್ ಬಾರ್ ಬಿದಾಯಿ ದೇ ಮಾ ಘುರೆ ಆಶಿ ( ಒಮ್ಮೆ ಕಳಿಸಿಕೊಡಮ್ಮ ನಾ ಹೋಗಿಬರುವೆ..)… ಹರ್ಷಚಿತ್ತದಿಂದ ಗಲ್ಲಿಗೆ ಏರುತ್ತಿರುವ ಖುದಿರಾಮ್ ರನ್ನು ನೆನೆಯುತ್ತಾ ಈ ಕವಿತೆಯನ್ನು ಬರೆಯುತ್ತಾರೆ. ನೋಡಿದವರು ಹೇಳುತ್ತಾರೆ. ಪೊಲೀಸರು ಖುದಿರಾಮನನ್ನು ಎಳೆದಂತೆ ಅಲ್ಲ; ಬದಲಿಗೆ ಅವನೇ ತನ್ನ ಪುಟ್ಟ ಬಲಶಾಲಿ ಕೈಗಳಿಂದ ಬ್ರಿಟೀಷ್ ಪೊಲೀಸರನ್ನು ಗಲ್ಗಂಬದೆಡೆಗೆ ಎಳೆದಂತೆ ತೋರುತ್ತಿತ್ತು ಆ ದೃಶ್ಯ ,ಎಂದು ನುಡಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ರವರು ಮಾತನಾಡುತ್ತಾ ಭಾರತ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಅತಿ ಕಿರಿಯ ವಯಸ್ಸಿನ ಹುತಾತ್ಮರಾದ ಖುದಿರಾಮ್ ಬೋಸ್, ತಮ್ಮ 18ನೇ ವಯಸ್ಸಿನಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ಹೋರಾಡಿ ನೇಣಿಗೇರಿದರು. ಖುದಿರಾಮ್ ಒಂದು ಅಪ್ರತಿಮ ವ್ಯಕ್ತಿತ್ವ, ಅನ್ಯಾಯವನ್ನು ಕಂಡರೆ ಅದೆಂತಹ ಆಕ್ರೋಶ! ನೇಣಿಗೆ ಹೋಗುವ ಮುನ್ನವು ಎದೆಯುಬ್ಬಿಸಿ ದಿಟ್ಟತನದಿಂದ ಹಾಗೂ ಮುಖದಲ್ಲಿ ಮುಗುಳುನಗೆಯನ್ನಿರಿಸಿ ನೇಣುಗಂಬವನ್ನೇರಿದ ದೃಶ್ಯವನ್ನು ನೋಡಿ ಅಂದಿನ ಬಂಗಾಳದ ಜನ ದಿಗ್ಬ್ರಾಂತರಾದರು. ಅಂದಿನಿಂದ ಬಂಗಾಳದ ಮನೆಮನೆಯಲ್ಲೂ ಖುದಿರಾಮ್ ಜನಗಳ ಸ್ಫೂರ್ತಿಯಾದರು. ಎಷ್ಟೋ ತಾಯಂದಿರು ತಮ್ಮ ಮನೆಯಲ್ಲೂ ಖುದಿರಾಮ್ ಜನಿಸಲಿ ಎಂದು ಬಯಸಿದರು. ಚಿಕ್ಕ ವಯಸ್ಸಿನಲ್ಲೇ ಅಂತಹ ಧೀಮಂತ ವ್ಯಕ್ತಿತ್ವ ಬೆಳೆಯಲು ಸಾಧ್ಯವಾಗಿದ್ದಾದರೂ ಹೇಗೆ? ಅವರಿಗೆ ದೇಶದ ಶೋಷಿತರ, ಬಡಜನರ ಮೇಲಿದ್ದ ಪ್ರೀತಿಯೇ ಕಾರಣ. 11 ಆಗಸ್ಟ್, ಖುದಿರಾಮ್ ಬೋಸ್ ಹುತಾತ್ಮರಾಗಿ 116 ವರ್ಷಗಳು ಕಳೆದಿದೆ. ಆದರೆ ಇಂದಿಗೂ ಅವರು ಪ್ರೀತಿಯಿಂದ ಕಂಡ ಬಡಜನರ, ರೈತ-ಕಾರ್ಮಿಕರಮೇಲಿನ ಶೋಷಣೆ ನಿಂತಿಲ್ಲ. ಈ ದೇಶದ ವಿದ್ಯಾರ್ಥಿಗಳು, ಯುವಕರು ನಾವು ಖುದಿರಾಮ್ ರ ಹೋರಾಟದ ಕಿಚ್ಚನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕಿದೆ. ಅವರ ಕನಸಿನಂತೆ ಬಡಜನರ ಮೇಲಿನ ಶೋಷಣೆಯನ್ನು ಕೊನೆಮಾಡಲು ಪಣತೊಡಬೇಕಿದೆ. ಆಗ ಮಾತ್ರವೇ ನಾವು ಖುದಿರಾಮ್ ಬೋಸ್ ರಿಗೆ ನಿಜವಾದ ಗೌರವವನ್ನು ಸಲ್ಲಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಉಪಧ್ಯಕ್ಷರಾದ ಎಂ.ಶಾಂತಿ, ಯು. ಉಮಾದೇವಿ ಕಛೇರಿ ಕಾರ್ಯದರ್ಶಿ ನಿಹಾರಿಕ ಮತ್ತು ಸದಸ್ಯರು, ವಿದ್ಯಾರ್ಥಿಗಳು, ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article
error: Content is protected !!