ಹೈದ್ರಾಬಾದ್ ಕರ್ನಾಟಕ ನಾಮ ಬದಲಾವಣೆಯಿಂದ ಕಲ್ಯಾಣವಾದದ್ದಾದರೂ ಏನು

 

ರಾಯಚೂರು ಜಿಲ್ಲೆ

ರಾಯಚೂರು: ಹೈದರಾಬಾದ್ ಕರ್ನಾಟಕದಿಂದ ಕಲ್ಯಾಣ ಕರ್ನಾಟಕವಾಯಿತು, ನಾಮ ಬದಲಾವಣೆಯಿಂದ ಕಲ್ಯಾಣವಾಗಿದ್ದಾರೂ‌ ಏನು. ನಾಮ ಬದಲಾವಣೆ ಮಾಡಿದ ಸರ್ಕಾರ ಈ ಭಾಗದ ಕಲ್ಯಾಣವನ್ನೇ ಮರೆತುಬಿಟ್ಟಿತೇ.ನಾಮ ಬದಲಾವಣೆ ನಂತರ ಸರ್ಕಾರ ಈ ಭಾಗಕ್ಕೆ ಮಾಡಿದ್ದಾದರೂ ಏನು. ಅನುದಾನ ಬಂದ್ದದ್ದು ಆಯ್ತು, ಖರ್ಚು ಆದದ್ದು ಆಯ್ತು ಸಾವಿರಾರು ಕೋಟಿ ಅನುದಾನ ಹೋದದ್ದಾದರೂ ಎಲ್ಲಿ.ಹೌದು ದೇಶವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದರೆ, ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಈ ಹೈ–ಕ ಪ್ರದೇಶಕ್ಕೆ 1948ರ ಸೆ.17ರಂದು ಸ್ವಾತಂತ್ರ್ಯ ದೊರೆಯಿತು.ಇದರ ಸವಿ ನೆನಪಿಗಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ವಿಮೋಚನಾ ದಿನ ಆಚರಿಸಲಾಗುತ್ತಿದೆ.ಇದನ್ನು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಷ್ಟೇ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸ್ವತಂತ್ರ ದೇಶವನ್ನೇ ಹೊಂದುವ ಅಪೇಕ್ಷೆ ಹೊಂದಿದ್ದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಹಿರಿಯರ ಹೋರಾಟ ಫಲದಿಂದ ಭಾರತ ದೇಶದಲ್ಲೇ ವಿಲೀನ ಮಾಡಲಾಯಿತು. ನಂತರದ ದಿನಗಳಲ್ಲಿ ಆರಂಭವಾದ ರಾಜಕೀಯ ಚದುರಂಗದಾಟದಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಪಡಿಸಲಾಯಿತು. ವಿಮೋಚನೆಯ ನಂತರ ಅಧಿಕಾರ ಹಿಡಿದ ವಿವಿಧ ರಾಜಕೀಯ ಪಕ್ಷಗಳು ಈ ಭಾಗದ ಅಭಿವೃದ್ಧಿ ಮಂತ್ರವನ್ನು ಪಠಿಸಲಿಲ್ಲಿ. ಕೇವಲ ಅಧಿಕಾರಕ್ಕಾಗಿ ಈ ಭಾಗದ ಜನಪ್ರತಿನಿಧಿಗಳನ್ನು ಬಳಸಿಕೊಂಡವೇ ಹೊರತು ಅಭಿವೃದ್ಧಿ ಬಗ್ಗೆ ಮಾತ್ರ ಯಾವುದೇ ರೀತಿಯಾಗಿ ಯೋಚನೆ ಮಾಡಲಿಲ್ಲ.ಪ್ರಸ್ತುತ ಇಡೀ ದೇಶದಲ್ಲಿಯೇ ಅತೀ ಹಿಂದುಳಿದ ಪ್ರದೇಶಗಳು ಇರುವುದೇ ಇದೇ ಹೈದರಾಬಾದ್-ಕರ್ನಾಟಕ ಪ್ರದೇಶದ ಭಾಗದಲ್ಲಿ. ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿ ಪರ ಈ ಮೂರು ವಿಚಾರಗಳಲ್ಲಿಯೂ ಕೂಡ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಪಟ್ಟ ಪ್ರದೇಶಗಳು ಇದೇ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಾಗಿದೆ.
ಹೈ-ಕಾ ಭಾಗದ ಸಮಸ್ಯೆಗಳು :-
ಭಾರತ ದೇಶದಲ್ಲಿ ಸ್ವತಂತ್ರ ನಂತರ ರಾಜ್ಯಗಳ ವಿಂಗಡಣೆ ಸಂದರ್ಭದಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ಕರ್ನಾಟಕ ರಾಜ್ಯದ ಸುಪರ್ದಿಗೆ ಸೇರಿಸಲಾಯಿತು. ಅದಾದನಂತರ ಕರ್ನಾಟಕ ರಾಜ್ಯದಲ್ಲಿ ಈ ಆರು ಜಿಲ್ಲೆಗಳ ಅಭಿವೃದ್ದಿಗಾಗಿ ಆಲೋಚನೆಗಳು ಕೇವಲ ಹೆಸರಿಗೆ ಮಾತ್ರ ಎಂಬಂತಾಯಿತು. ರಾಜ್ಯದ ವಿವಿಧ ಜಿಲ್ಲೆಗಳು ಅನೇಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದರೂ ಕೂಡ ಈ ಭಾಗದ ಜಿಲ್ಲೆಗಳಲ್ಲಿ ಅಭಿವೃದ್ಧಿ ಮಾತ್ರ ಅಷ್ಟಕಷ್ಟೇ.ಈ ಆರು ಜಿಲ್ಲೆಗಳಲ್ಲಿ ವಿಮೋಚನೆ ಆದಾಗಿನಿಂದಲೂ ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ ಆ ಸಮಸ್ಯೆಗಳ ಸಾಲಿನಲ್ಲಿ ಪಟ್ಟಿ ನೊಡಿದಾಗ ಮೊದಲಿಗೆ ತಟ್ಟನೆ ಕಾಣುವುದೇ ಶೈಕ್ಷಣಿಕವಾಗಿ ವಂಚಿತವಾಗಿ ಸೌಲಭ್ಯಗಳೇ ಇಲ್ಲದಿರುವುದು, ಈ ಭಾಗದ ಜನರಿಗಾಗಿ ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರಗಳು ವಿಫಲ.ಸರ್ಕಾರದ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ.1947 ರ ನಂತರ ಈ ಪ್ರದೇಶಗಳು ಸ್ವತಂತ್ರ ವಾದರೂ ಇಲ್ಲಿಯವರೆಗೂ ಯಾವುದೇ ರೀತಿಯ ಸಂತಸದಿಂದ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಮಾತ್ರ ಇಲ್ಲ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪಣ ತೊಡದ ಸರಕಾರಗಳು ಕೇವಲ ಘೋಷಣೆಗಳಲ್ಲಿಯೇ ಕಾಲಕಳೆದಿವೆ.ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದ ಈ ಭಾಗದ ಜನರ ಆಶಯಗಳನ್ನು ಈಡೇರಿಸುವ ಸಲುವಾಗಿ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು, ಈ ಭಾಗಕ್ಕೆ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ಧಿ ಮಾಡುವ ಯೋಜನೆ ರೂಪಿಸಲಾಯಿತು. ಆದರೆ ರಾಜಕೀಯ ವ್ಯಕ್ತಿಗಳ ಮತ್ತು ಅಧಿಕಾರಿಗಳ ಅಭಿವೃದ್ಧಿ ಇಚ್ಚಾಶಕ್ತಿ ಕೊರತೆಯಿಂದ ಅಭಿವೃದ್ಧಿ ಮಂಡಳಿ ಇದ್ದರೂ ಇಲ್ಲದಂತಾಗಿದೆ.ಅಭಿವೃದ್ಧಿ ಮಂಡಳಿ ಸಾಪನೆಯಾದ ನಂತರ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿ ಅನುದಾನ ಖರ್ಚಾದರೂ ಅಭಿವೃದ್ಧಿ ಮಾತ್ರ ಕಣ್ಮರೆಯಾಗಿದೆ. ಆಡಳಿತಕ್ಕೆ ಬರುವ ಸರಕಾರಗಳು ಈ ಭಾಗದ ಅಭಿವೃದ್ದಿಗಾಗಿ ಪ್ರತೀ ವರ್ಷ 1500 ಕೋಟಿ ಅನುದಾನ ನೀಡುತ್ತಿದ್ದರು ಕೂಡ ಈ ಭಾಗದ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ.ಈ ಭಾಗದ 6 ಜಿಲ್ಲೆಗಳ ಸರ್ಕಾರಿ ಇಲಾಖೆಗಳನ್ನು ನೋಡಿದಾಗ ಯಾವುದೇ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಭಾಗಶಃ ಇಲಾಖೆಗಳಲ್ಲಿ ಇರುವುದೇ ಪ್ರಭಾರಿ ಅಧಿಕಾರಿಗಳು. ಇಂತಹ ಪ್ರಭಾರಿ ಅಧಿಕಾರಿಗಳಿಂದ ಜಿಲ್ಲೆಯ ಅಭಿವೃದ್ಧಿ ಆಗುವುದಾದರೂ ಎಲ್ಲಿ. ಈ ಆರು ಜಿಲ್ಲೆಗಳಲ್ಲಿ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರು ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ಇಲಾಖೆಗಳು ಹೊಂದಿರುವುದು ಇದೇ ಪ್ರಭಾರಿ ಅಧಿಕಾರಿಗಳನ್ನೇ. ಅಧಿಕಾರಿಗಳನ್ನೆ ನೇಮಿಸುವಲ್ಲಿ ವಿಫಲವಾದ ಸರಕಾರ.ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕನಸು ನನಸಾಗುವೆದಾದರೂ ಯಾವಾಗ.ಹೈದ್ರಾಬಾದ್-ಕರ್ನಾಟಕ ಭಾಗದ 6 ಜಿಲ್ಲೆಗಳನ್ನು‌ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಈ ಜಿಲ್ಲೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮತ್ತು ಈ ಭಾಗದ ಜನರಿಗೆ ನಿಜಕ್ಕೂ ಸಂವಿಧಾನದ ಪ್ರಕಾರ ನ್ಯಾಯ ಒದಗಿಸಲು ಈ ಭಾಗಕ್ಕೆ 371ಜೆ ಜಾರಿ ಮಾಡಲಾಯಿತು.371 ಜೆ ಜಾರಿ ಮಾಡಿದ ದಶಕಗಳೇ ಕಳೆಯುತ್ತಾ ಬಂದರೂ ಈ ಪರೀಚ್ಚೇದನೆಯನ್ನು ಸಮರ್ಪಕವಾಗಿ ಜಾರಿ ಮಾಡುವುದರಲ್ಲಿ ಸರ್ಕಾರಗಳು ಎಡವಿದೆ. ಉದ್ಯೋಗದಲ್ಲಿ ಇವರೆಗೂ ಸಮರ್ಪಕವಾಗಿ ಮೀಸಲಾತಿ ದೊರೆತಿಲ್ಲ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಇರುವ ಗೊಂದಲಗಳ ನಿವಾರಣೆಗೆ ಕೂಡ ಸಾಕಷ್ಟು ಅಡೆತಡೆಗಳಿವೆ. ಈ ಭಾಗದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೊಡೆದೋಡಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ.ಈ ಭಾಗಕ್ಕೆ ಸ್ವತಂತ್ರ ಬಂದು 7 ದಶಕಗಳು ಕಳೆದರೂ ಕೂಡ ಯಾವುದೇ ರೀತಿಯಾದ ಅಭಿವೃದ್ಧಿಗಳು ಮಾತ್ರ ಕಂಡುಬರಲಿಲ್ಲ. ಆದರೆ ಇದೀಗ ಬಿಜೆಪಿ ಸರ್ಕಾರ ನಾಮ ಬದಲಾವಣೆಗೆ ಮುಂದಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಎಂದು ಮರುನಾಮಕರಣ ಮಾಡಿದೆ. ಆದರೆ ಮರುನಾಮಕರಣದಿಂದ ಈ ಭಾಗಕ್ಕೆ ಸಿಕ್ಕಿದ್ದಾದರೂ ಏನು.ಮರುನಾಮಕರಣ ಮಾಡಿ ಒಂದು ವರ್ಷ ಕಳೆಯಿತಾದರೂ ಈ ಆಡಳಿತ ರೂಢ ಸರ್ಕಾರದಿಂದ ಸಿಕ್ಕಿದ್ದಾದರೂ ಏನು. ಕೇವಲ ನಾಮ ಬದಲಾವಣೆಯಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಇರುವುದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆಗಿದ್ದು ಬಿಟ್ಟರೆ ಮತ್ತೇನು ಬದಲಾವಣೆ ಕಂಡುಬಂದಿಲ್ಲ.ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿರುವ ರಾಜ್ಯಸರಕಾರ ಯಾವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿಸಿದೆ. ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಈ ಭಾಗದ ಜನರ ಆಶೋತ್ತರಗಳಿಗೆ ಒತ್ತು ನೀಡಿ ಸಾಮಾಜಿಕ, ಶೈಕ್ಷಣಿಕ ಮತ್ತು ಅಭಿವೃದ್ಧಿಗೆ ಒತ್ತು ನೀಡಿ ಬದಲಾವಣೆ ತಂದಲ್ಲಿ ನಿಜಕ್ಕೂ ಈ ಮರು ನಾಮಕರಣದ ಸಾರ್ಥಕತೆ ಆದಂತಾಗುತ್ತದೆ.ಆಗ ಮಾತ್ರ ಈ ಭಾಗದಲ್ಲಿ ಆಚರಿಸುವ ಈ ದಿನ ಅರ್ಥಪೂರ್ಣವಾಗುತ್ತದೆ.

Share and Enjoy !

Shares