ವಿಜಯನಗರವಾಣಿ ಸುದ್ದಿ:
ಬಳ್ಳಾರಿ ಜಿಲ್ಲೆ
ಕಂಪ್ಲಿ:ಸೆ.28. ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ಕರೆ ನೀಡಿದ ಕರ್ನಾಟಕ ಬಂದ್ ಹಿನ್ನಲೆ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಕಂಪ್ಲಿ ಪಟ್ಟಣದಲ್ಲಿ ಇಂದು ಬೃಹತ್ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಿದರು. ಇಲ್ಲಿನ ಎಪಿಎಂಸಿ ಬಳಿಯಿಂದ ಆರಂಭಗೊಂಡ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ, ಸರ್ಕಾರಿ ಆಸ್ಪತ್ರೆ, ಸಂತೆ ಮಾರುಕಟ್ಟೆ ಮುಖಾಂತರ ಸಾಂಗತ್ರಯ ಪಾಠ ಶಾಲೆ ಬಳಿ ಸೇರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕಿಸಾನ್ ಜಾಗೃತಿ ವಿಕಾಸ್ ಸಂಘ, ವಿವಿಧ ಪ್ರಗತಿಪರ ರೈತ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತರು ಬೃಹತ್ ಕಾಲ್ನಡಿಗೆ ಮೆರವಣಿಗೆ ನಡೆಸಿ, ನಡುವಲ ಮಸೀದಿ, ರಾಜಕುಮಾರ ಮುಖ್ಯರಸ್ತೆ ಮುಖಾಂತರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ವಿರುದ್ಧ ಅಂಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಂಪ್ಲಿ ನಗರ ಘಟಕ ಅಧ್ಯಕ್ಷ ಕೊಟ್ಟೂರ್ ರಮೇಶ್ ಮಾತನಾಡಿ, ವಿವಿಧ ಕಾಯ್ದೆಗಳ ಸುಗ್ರೀವಾಜ್ಞೆಯೊಂದಿಗೆ ರೈತರ ಮೇಲೆ ಬಂಡೆ ಎಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದೆ. ರೈತರೊಂದಿಗೆ ಚರ್ಚಿಸದೆ ವಿವಿಧ ಮಸೂದೆಗಳನ್ನು ಜಾರಿಗೆ ತಂದಿದೆ. ರೈತ ವಿರೋಧಿ ಕಾಯ್ದೆಗಳೊಂದಿಗೆ ರೈತರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರ ಕಾಯ್ದೆಗಳ ತಿದ್ದುಪಡಿ ಮಾಡಲು ಬಿಡುವುದಿಲ್ಲ. ಸರ್ಕಾರಗಳು ಎಚೆತ್ತು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟಗಳು ಉಗ್ರ ರೂಪ ತಾಳಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ರು.ನಂತರ ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಷ್ಟೀಯ ಅಧ್ಯಕ್ಷ ಪಿ.ಯುಗಂಧರ್ ನಾಯ್ಡು ಮಾತನಾಡಿ, ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ರೈತರ ಮರಣ ಶಾಸನ ಬರೆಯಲು ಸರ್ಕಾರಗಳು ಹೊರಟಿವೆ. ರೈತರ ಹೆಸರಿನ ಮೇಲೆ ಅಧಿಕಾರವಹಿಸಿಕೊಂಡ ರಾಜ್ಯ ಸರ್ಕಾರ ಕಾರ್ಪೊರೇಟರ್ ಕಂಪನಿಗಳ ಪರವಾಗಿ ನಿಂತಿದೆ. ರೈತ, ದಲಿತ, ಕಾರ್ಮಿಕ ವಿರೋಧಿ ವಿಧೇಯಕಗಳ ಮಂಡನೆಯೊಂದಿಗೆ ರೈತರ ಬೆನ್ನಿಗೆ ಚೂರಿ ಹಾಕಿದೆ. ಎಲ್ಲಾ ಪಕ್ಷಗಳು ರೈತ ವಿರೋಧಿಗಳೇ. ಹಾಗಾಗಿ ಸರ್ಕಾರಗಳಿಗೆ ಬುದ್ಧಿ ಕಲಿಸಬೇಕಾಗಿದೆ. ಕೂಡಲೇ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ರೆ ಮುಂದಿನ ದಿನದಲ್ಲಿ ಸರ್ಕಾರಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಹರಿಹಾಯ್ದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ವಿ.ಟಿ.ನಾಗರಾಜ, ಗಂಗಾಧರ್, ಗಣೇಶ್ ತಾತ, ಟಿ. ಗಂಗಣ್ಣ, ಮಂಜುನಾಥ, ಮುರಾರಿ, ದೇವೇಂದ್ರ, ದೊಡ್ಡ ಬಸಪ್ಪ, ಬಿ. ನಾರಾಯಣಪ್ಪ, ಇಟಗಿ ಬಸವರಾಜಗೌಡ, ಹಬೀಬ್ ರೆಹಮಾನ್, ಎಂ.ಉಸ್ಮಾನ್, ವೀರಾಂಜಿನಿಯಲು, ಬಿ. ರಮೇಶ್, ಬಳೇ ಮಲ್ಲಿಕಾರ್ಜುನ, ಕರೇಕಲ್ ಮನೋಹರ, ಇಸ್ಮಾಯಿಲ್ ಬೇಗ್, ವಸಂತರಾಜ್ ಕಹಳೆ, ಕಂಬಳಿ ರಾಮಕೃಷ್ಣ, ಯಲ್ಲಮ್ಮ ಸೇರಿದಂತೆ ವಿವಿಧ ರೈತ ಹಾಗೂ ಕನ್ನಡಪರ ಪದಾಧಿಕಾರಿಗಳು ಮತ್ತು ರೈತರಿದ್ದರು.