ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ:
ಕಂಪ್ಲಿ: ರೈತರು ಬೆಳೆದ ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ತಿಂದು ಹಾಕಿ, ಹಾಳು ಮಾಡಿ ರೈತರನ್ನು ಚಿಂತೆಗೀಡು ಮಾಡಿದ್ದ ಕರಡಿಯೊಂದು ತಾಲ್ಲೂಕಿನ ದೇವಲಾಪುರ ಗ್ರಾಮದ ಮಾರೆಮ್ಮ ದೇವಸ್ಥಾನ ಬಳಿಯ ಕುಂಬಾರಕುಂಟೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಗಿನ ಜಾಗ ಬಿದ್ದಿದೆ.
ದೇವಲಾಪುರ ಮತ್ತು ಮೆಟ್ರಿ ಸೇರಿದಂತೆ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದ ಹೊಲಗಳಿಗೆ ಕರಡಿಗಳು ಇತ್ತೀಚೆಗೆ ದಾಳಿ ನಡೆಸಿ, ಬೆಳೆಗಳನ್ನು ತಿಂದು ಹಾಕಿ, ಹಾಳು ಮಾಡಿದ್ದವು. ಈ ಕರಡಿಗಳ ದಾಳಿಗೆ ರೈತರು ಸಂಕಷ್ಟ ಅನುಭವಿಸುವ ಜತೆಗೆ ಬೆಳೆ ನಷ್ಟದ ಕಣ್ಣೀರು ಹಾಕುವಂತಾಗಿತ್ತು. ಕಣವಿಮಾರೆಮ್ಮ ದೇವಸ್ಥಾನ ಬಳಿಗೆ ಕರಡಿ ರಾತ್ರಿ ಸಮಯದಲ್ಲಿ ಬಂದು ಹೋಗುತ್ತಿತ್ತು. ಇದರಿಂದ ಇಲ್ಲಿನ ಪೂಜಾರಿಗಳಿಗೆ ರಾತ್ರಿ ಸಮಯದಲ್ಲಿ ಕರಡಿ ಉಪಟಳದಿಂದ ಎಚ್ಚರದಿಂದಿರಬೇಕಾದ ಅನಿವಾರ್ಯತೆ ಜತೆಗೆ ದಿನವಿಡಿ ನಿದ್ದೆಗೆಡುವ ಮೂಲಕ ತೊಂದರೆ ಉಂಟಾಗಿತ್ತು. ಇಲ್ಲಿನ ಕರಡಿ ಕಾಟ ತಪ್ಪುವೊದಾದರು ಹೇಗಪ್ಪ ಅನ್ನುವ ಜತೆಗೆ ಕರಡಿ ಕಾಟ ತಪ್ಪಲೆಂದು ದೇವಿಯ ಮೊರೆ ಹೋಗುವಂತಾಗಿತ್ತು. ಇಲ್ಲಿನ ಕರಡಿಗಳ ಕಾಟಕ್ಕೆ ರೈತರು ಅರಣ್ಯ ಇಲಾಖೆಯು ಬೋನು ಅಳವಡಿಸಿ ಕರಡಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಒತ್ತಾಯಿಸಿದ್ದರು. ಇದರಿಂದ ಹೊಸಪೇಟೆ ಉಪ ವಲಯದ ಅರಣ್ಯ ರಕ್ಷಕ ಬಿ.ರಾಘವೇಂದ್ರ ಅವರು ಇತ್ತೀಚೆಗೆ ಕರಡಿಗಳ ದಾಳಿಗೆ ಹಾಳಾದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಕರಡಿಗಳನ್ನು ಹಿಡಿಯಲು ಅಳವಡಿಸಿದ ಬೋನಿಗೆ ರೈತರ ನಿದ್ದೆಗೆಡಿಸಿದ್ದ ಕರಡಿ ಇಂದು ಬೆಳಗಿನ ಜಾವದಲ್ಲಿ ಸೆರೆಯಾಗಿದೆ. ಕರಡಿ ಬೋನಿಗೆ ಬಿದ್ದಿರುವ ವಿಷಯ ತಿಳಿದ ರೈತರು ಹಾಗೂ ಸಾರ್ವಜನಿಕರು ಬೋನಿನ ಕಡೆಗೆ ಆಗಮಿಸಿ ಸೆರೆಸಿಕ್ಕ ಕರಡಿಯನ್ನು ನೋಡಿ ಕಣ್ತುಂಬಿಕೊಳ್ಳುವ ಜತೆಗೆ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದ್ದು, ಇನ್ನೂ ಕರಡಿಗಳು ಇದ್ದು ಇವುಗಳನ್ನು ಸಹ ಹಿಡಿದು ಬೇರೆಕಡೆ ಸಾಗಿಸಬೇಕೆಂದು ರೈತರ ಆಗ್ರಹವಾಗಿದೆ. ಇಂದು ಸೆರೆಸಿಕ್ಕ ಕರಡಿಯನ್ನು ಅರಣ್ಯ ಇಲಾಖೆಯು ಬೇರೆಡೆ ಸಾಗಿಸಿದೆ.