ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಕತೆ ಕೊರತೆಯನ್ನು ತಗ್ಗಿಸಲು ಪೋಷಣ್ ಮಾಸಾಚರಣೆ ಕಾರ್ಯಕ್ರಮ ಸಾಮಾಜಿಕ ಜಾಗೃತಿ ಮೂಡಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಹೇಳಿದರು.
ಪಟ್ಟಣದಲ್ಲಿ ಸಿಡಿಪಿಒ ಇಲಾಖೆಯಿಂದ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಅಭಿಯಾನದ ಸಮಾರೋಪ ಕಾರ್ಯಕ್ರಮಕ್ಕೆ ಬುಧವಾರ ಗುರುಭವನದಲ್ಲಿ ಚಾಲನೆ ನೀಡಿ ಮಾತನಾಡಿದರು. ತಾಯಿ ಮಕ್ಕಳ ಸಂಪೂರ್ಣ ಪೋಷಣೆಯನ್ನು ಖಾತರಿಪಡಿಸಿ ಸದೃಢ ಭಾರತ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಅಪೌಷ್ಟಿಕತೆ ಮುಕ್ತ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಿದೆ ಎಂದರು.
ಸಿಡಿಪಿಒ ಚನ್ನಪ್ಪ ಮಾತನಾಡಿ, ಮಾಸಾಚರಣೆಯ ಮೂಲಕ 6 ವರ್ಷದೊಳೊಗಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವನ್ನು ತಡೆಗಟ್ಟುವುದು, ಅಪೌಷ್ಟಿಕತೆಯನ್ನು ತಡೆಗಟ್ಟುವುದು ಮತ್ತು ಕಡಿಮೆಗೊಳಿಸುವುದು, 15-49 ವರ್ಷದ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣುಮಕ್ಕಳಲ್ಲಿ ರಕ್ತದ ಕೊರತೆಯನ್ನು ಕಡಿಮೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ನಿಗದಿತ ಗುರಿಯೊಳಗೆ ನಿಗದಿತ ಸಮಯದೊಳಗೆ ಪೌಷ್ಟಿಕ ಸ್ಥಾನಮಾನದಲ್ಲಿ ಸುಧಾರಣೆಯನ್ನು ತರುವತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೋಷಣ್ ಅಭಿಯಾನದ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಿವೆ. ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಲಿ ಎಂದರು.
ತೋಟಗಾರಿಕೆ ಇಲಾಖೆ ಡಾ.ಪರಮೇಶ್ವರ ಮಾತನಾಡಿ, ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ತೋಟ ನಿರ್ಮಿಸುವಂತೆ ಜಾಗೃತಿ ಮೂಡಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಸಿಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ, ಮಕ್ಕಳಿಗೆ ಅನ್ನ ಪ್ರಾಶನ, ಅಪೌಷ್ಟಿಕ ಮಕ್ಕಳಿಗೆ ಔಷಧಿ ವಿತರಣೆ ಮತ್ತು ನಿವೃತ್ತ ಅಂಗನವಾಡಿ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಫಕೃದ್ಧೀನ್, ವೈದ್ಯಾಧಿಕಾರಿ ಡಾ.ಮೋಹನ್, ಪುರಸಭೆ ಅಧಿಕಾರಿ ಬಸವರಾಜ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಪರಮೇಶ್ವರ, ತಾ.ಪಂ ಸಂಯೋಜಕ ಉಮೇಶ್ ಗೌಡ, ಆಯುಷ್ ವೈದ್ಯೆ ಉಮಾಪಾಟೀಲ್, ಆಶಾಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಟ್ಟಮ್ಮನಹಳ್ಳಿ ವೀರೇಶ್, ಚೈಲ್ಡ್‍ಲೈನ್ ಸಂಯೋಜಕ ಶಿವಕುಮಾರ, ಮೇಲ್ವಿಚಾರಕಿಯರಾದ ಎ.ಬಸಮ್ಮ, ನಾಗರತ್ನ, ಜಿ.ಉಮಾ, ಟಿ.ಲಲಿತಾ, ಸಿಬ್ಬಂದಿ ರಫಿ, ಕೆ.ಬಿ.ವಿಕ್ರಂ, ಪೋಷಣ್ ಅಭಿಯಾನ ಸಂಯೋಜಕ ಸುನೀಲ್, ಮಲ್ಲಿಕಾರ್ಜುನ್, ಅಂಜಿನಿ, ದಿವಾಕರ ಇತರರಿದ್ದರು. ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕರು ಭಾಗವಹಿಸಿದ್ದರು.