ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಬಳ್ಳಾರಿ:-ಮುಂದಿನ 2021ರ ಮಾರ್ಚ್‍ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮಹಿಳೆಯೊಬ್ಬರು ಬಳ್ಳಾರಿ ಜಿಲ್ಲಾ ಸಾಹಿತ್ಯ ಪರಿಷತ್ ಕಣಕ್ಕೆ ಸ್ಪರ್ಧಿಸಲು ಆಸಕ್ತಿ ವಹಿಸಿದ್ದಾರೆ.
ಕವಯಿತ್ರಿ, ಲೇಖಕಿ, ಉಪನ್ಯಾಕಿ, ವಕೀಲೆ ಹಾಗೂ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿರುವ ಶಿಕ್ಷಣ ಪ್ರೇಮಿ ವಿನೋದಾ ಕರಣಂ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಮಹಿಳೆಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ಕಸಾಪ ಅಧ್ಯಕ್ಷರಾಗಿ ಪುರುಷ ಪುಂಗವರೇ ಸಾಹಿತ್ಯ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಈ ಬಾರಿ ಮಹಿಳೆಯೋರ್ವರು ಆ ಗಾದಿಯನ್ನು ಅಲಂಕರಿಸಲು ಆಸಕ್ತಿ ತೋರಿರುವುದು ಜಿಲ್ಲೆಯ ಸಾಹಿತ್ಯ ಪ್ರಿಯರಲ್ಲಿ ಅಚ್ಚರಿಯೊಂದಿಗೆ ಈ ಬಾರಿ ಸಾಹಿತ್ಯ ಸೇವೆ ಮಾಡಲು ಮಹಿಳೆಯರಿಗೂ ಅವಕಾಶ ನೀಡಬಾರದ್ಯಾಕೆ? ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ವಿನೋದಾ ಕರಣಂ ಸಾಹಿತ್ಯಾಸಕ್ತರಷ್ಟೇ ಅಲ್ಲ. ಅವರೊಬ್ಬ ಪತ್ರಕರ್ತೆಯಾಗಿಯೂ ಈ ಹಿಂದೆ ಕೆಲಸ ಮಾಡಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಸುಸೂತ್ರವಾಗಿ ನಿಭಾಯಿಸುವ ವಿಶ್ವಾಸ ಹೊಂದಿರುವ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.