ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ.
ಉತ್ತರ ಪ್ರದೇಶದ ಹತ್ರಾಸ್‍ನ ಯುವತಿಯ ಮೇಲೆ ನಡೆದ ಅತ್ಯಾಚಾರ, ಹಲ್ಲೆಯು ಮತ್ತೊಂದು ಹೃದಯವಿದ್ರಾವಕ ಘಟನೆಯಾಗಿದೆ. ಅಲ್ಲಿನ ಸರ್ಕಾರದ ನಿರ್ಲಕ್ಷ್ಯ ಮತ್ತು ಆರೋಪಿಗಳಿಗೆ ರಕ್ಷಣೆ ನೀಡುವ ಧೋರಣೆಯನ್ನು ಖಂಡಿಸುತ್ತೇವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಿ.ಸರೋಜ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜನವಾದಿ ಮಹಿಳಾ ಸಂಘಟನೆ ಹಾಗೂ ಎಸ್‍ಎಫ್‍ಐ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ 19ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆ ಮಹಿಳೆಯ ಮೇಲೆ ಹಿಂಸೆಯನ್ನೆಸಗಿ ಗಾಯಗೊಳಿಸಲಾಗಿತ್ತು. ಸೆ.14ರಿಂದ 29ರವರೆಗೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಆ ನತದೃಷ್ಟ ಯುವತಿ ಕೊನೆಗೂ ಸಾವನ್ನಪ್ಪಿದ್ದಾಳೆ. ಆಕೆ ಜೀವದಿಂದ ಇದ್ದಾಗಲೂ ಪೊಲೀಸ್ ಇಲಾಖೆ ಅಮಾನುಷವಾಗಿ ನಡೆಸಿಕೊಂಡಿತ್ತು. ಆಕೆಯ ಸಾವಿನ ನಂತರ ಕನಿಷ್ಟ ಘನತೆಯ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡದೆ ಕುಟುಂಬದವರನ್ನು ಕೂಡಿಟ್ಟು ಬಲವಂತವಾಗಿ ಪೊಲೀಸರು ಬೆಳಗಿನ ಜಾವದಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ಮಾಡಿರುವುದು ನೋಡಿದರೆ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ನಾಚಿಕೆಯಾಗಬೇಕು. ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಆದ್ದರಿಂದ ಈ ಕೂಡಲೇ ಇಂತಹ ಕುಕೃತ್ಯವೆಸಗಿರುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸಂಘಟನೆ ಒತ್ತಾಯಿಸುತ್ತದೆ ಎಂದರು.
ಎಸ್‍ಎಫ್‍ಐನ ಜಿಲ್ಲಾಧ್ಯಕ್ಷ ಹೆಚ್.ದೊಡ್ಡಬಸವರಾಜ ಮಾತನಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಈ ಕೂಡಲೇ ರಾಜೀನಾಮೆ ನೀಡಬೇಕು. ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವ ಮೂಲಕ ರಕ್ಷಣೆ ಕೊಡಬೇಕು. ಯುವತಿಯ ಶವಸಂಸ್ಕಾರಕ್ಕೂ ಅವಕಾಶ ನೀಡದೇ ತಾವೇ ಚಿತೆಗೆ ಬೆಂಕಿ ಇಟ್ಟ ಪೊಲೀಸ್ ಹಾಗೂ ಇತರ ಅಧಿಕಾರಿಗಳ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಪ್ರತಿಭಟನೆ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರ ಪ್ರತಿಕೃತಿ ದಹಿಸಿದರು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಸರ್ದಾರ್ ಹುಲಿಗೆಮ್ಮ, ಮುಖಂಡರಾದ ಬಿ.ರೇಣುಕಾ, ಯು.ಶಂಕ್ರಮ್ಮ, ಎಸ್‍ಎಫ್‍ಐ ತಾಲೂಕು ಸಂಚಾಲಕ ಅಬ್ದುಲ್ ಸುಭಾನ್, ಜಯಸೂರ್ಯ, ಲಕ್ಷ್ಮಣ, ಕೆ.ವಿಜಯ, ಸತೀಶ್, ಕೆ.ಎಂ.ಕಾರ್ತೀಕ್, ರಂಗಪ್ಪ ದಾಸರ, ಉಸ್ಮಾನ್ ಭಾಷಾ, ಸಿ.ಹನುಮಂತಪ್ಪ, ಕಮ್ಮಾರ ಬಸವರಾಜ, ಪಿ.ಅನಂತ ಭಾಗವಹಿಸಿದ್ದರು.