ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ಉತ್ತರ ಪ್ರದೇಶದ ಹತ್ರಾಸ್‍ನ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದಿಂದ ದೇಶದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಆರೋಪಿಗಳ ರಕ್ಷಣೆಗೆ ನಿಂತಿರುವ ಅಲ್ಲಿನ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಂಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿ ಮಾತನಾಡಿದರು, ಉತ್ತರ ಪ್ರದೇಶದ ಯುವತಿ ಮೇಲಿನ ಅತ್ಯಾಚಾರ ಹಾಗೂ ಕಾಂಗ್ರೆಸ್ ನಾಯಕರ ಬಂಧನವನ್ನು ವಿರೋಧಿಸಿ ವಾಗ್ದಾಳಿ ನಡೆಸಿದರು.ದಲಿತ ಯುವತಿಯನ್ನು ಯುವಕರು ರಾಕ್ಷಸರಂತೆ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿದ್ದಾರೆ. ಯುವತಿಯ ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೂ ಅವಕಾಶ ಕೊಡದೇ ಪೊಲೀಸ್ ಇಲಾಖೆ ಚಿತೆಗೆ ಬೆಂಕಿ ಇಟ್ಟಿದ್ದು ಖಂಡನೀಯ. ಪ್ರಕರಣವನ್ನು ಮುಚ್ಚಿಹಾಕಲು ಹಾಗೂ ಅರೋಪಿಗಳನ್ನು ರಕ್ಷಿಸಲು ಮುಂದಾಗಿರುವ ಅಲ್ಲಿನ ಸರ್ಕಾರ ಗೂಂಡಾ ವರ್ತನೆಯನ್ನು ಪ್ರದರ್ಶಿಸಿದೆ. ಮೃತ ಯುವತಿಯ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕೂಡಲೇ ರಾಜಿನಾಮೆ ನೀಡಬೇಕು. ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದರು.ಜಿಲ್ಲಾ ಪಂಚಾಯತ್ ಸದಸ್ಯ ಹೆಗ್ಡಾಳ್ ರಾಮಣ್ಣ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ವಾಲ್ಮೀಕಿ ಸಮಾಜದ ಮುಖಂಡ ಡಿಶ್ ಮಂಜುನಾಥ, ಕಾಂಗ್ರೆಸ್ ಮುಖಂಡ ಅಂಬಾಡಿ ನಾಗರಾಜ, ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಮಾತನಾಡಿದರು.ಈ ಸಂದರ್ಭದಲ್ಲಿ ಚಿಂತ್ರಪಳ್ಳಿ ದೇವೇಂದ್ರಪ್ಪ, ಹುಡೇದ್ ಗುರುಬಸವರಾಜ, ಪವಾಡಿ ಹನುಮಂತಪ್ಪ, ತೆಲಗಿ ಇಸ್ಮಾಯಿಲ್, ಕನ್ನಿಹಳ್ಳಿ ಚಂದ್ರಶೇಖರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.