ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೆಸ್ಕಾಂ ನೌಕರರಿಂದ ಪ್ರತಿಭಟನೆ

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಹಗರಿಬೊಮ್ಮನಹಳ್ಳಿ :ಕೇಂದ್ರ ಸರ್ಕಾರ 2003 ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಉದ್ದೇಶಿಸಿದ್ದು ಹಾಗೂ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ನೌಕರರ ಸಂಘದ ಕಾರ್ಯದರ್ಶಿ ಬಿ.ನಾರಪ್ಪ ಹೇಳಿದರು.ಪಟ್ಟಣದ ವಿದ್ಯುತ್ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಛೇರಿಯ ಮುಂದೆ ಕರ್ನಾಟಕ ವಿದ್ಯತ್ ಪ್ರಸರಣ ನಿಗಮ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಆಳ್ವಿಕೆಯನ್ನು ಅನುಸರಿಸುವಂತೆ ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿಗಳನ್ನು ಖಾಸಗೀಕರಿಸಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಹಾಗೂ ಖಾಸಗೀಕರಣಗೊಳಿಸುವುದರಿಂದ ಕೇವಲ ನೌಕರರಿಗೆ ಮಾತ್ರವಲ್ಲ ದೇಶದ ರೈತರಿಗೆ ಹಾಗೂ ಜನಸಾಮನ್ಯರಿಗೂ ತೊಂದರೆಯಾಗುತ್ತದೆ. ಸರ್ಕಾರವು ಕೇವಲ ತಮಗೆ ಬೇಕಾದ ನಾಲ್ಕಾರು ಜನರಿಗೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ಇಡೀ ದೇಶದ ಜನತೆಗೆ ಅನಾನುಕೂಲವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಸರಿಯಲ್ಲ. ಆದ್ದರಿಂದ ಇಂತಹ ಜನವಿರೋಧಿ ಧೋರಣೆಯನ್ನು ಖಂಡಿಸಿ ಇಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಶೀಘ್ರವೇ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಜೆಸ್ಕಾಂ ಅಧಿಕಾರಿ ಮಂಜುನಾಥ ಮಾತನಾಡಿ, ಕಾಯ್ದೆಗಳ ತಿದ್ದುಪಡಿ ಹಾಗೂ ಖಾಸಗೀಕರಣದಂತಹ ನಿರ್ಧಾರಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತವೆ. ಇಂತಹ ನಿರ್ಧಾರಗಳನ್ನು ಕೈಬಿಡುವಂತೆ ಒತ್ತಾಯಿಸಿ ಇಂದು ಇಡೀ ದಿನ ಸಂಘದ ಅಧಿಕಾರಿಗಳು ಹಾಗೂ ನೌಕರರು ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ವಾಸಪ್ಪ ಮೇಸ್ತ್ರಿ, ಅಂಜಿನಪ್ಪ, ಶಿವಮೂರ್ತಿ, ಎನ್.ಎಮ್.ಪವಾರ್, ಪಕ್ಕೀರಪ್ಪ, ವಿಜಯಲಕ್ಷ್ಮಿ, ಎಸ್.ಪ್ರಭಾಕರ್, ಪವಿತ್ರ, ಚಂದ್ರಮ್ಮ, ಗೋವಿಂದ, ನಂದೀಶ, ಉಮೇಶ, ಸಂತೋಷ, ಜಿ.ಕೆ.ದೊಡ್ಡರುದ್ರಪ್ಪ ಇತರರಿದ್ದರು.

Share and Enjoy !

Shares