ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ನಂದಿಪುರ ಮಹೇಶ್ವರ ಸ್ವಾಮೀಜಿಯವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೃಷಿ, ಪರಿಸರ ಪ್ರೇಮ, ಪಶುಸಂಗೋಪನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸೇವೆ, ಜೀವಮಾನದ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಮದರ್ ತೆರೆಸಾ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿರುವುದು ಇಡೀ ಭಕ್ತವೃಂದದಲ್ಲಿ ಹರ್ಷ ತಂದಿದೆ ಎಂದು ಕ್ರಿಯಾಶೀಲ ಗೆಳೆಯರ ಬಳಗದ ಎಂಪಿಎಂ ಮಂಜುನಾಥ ಹೇಳಿದರು.ತಾಲೂಕಿನ ಗದ್ದಿಕೇರಿ ಕುಟೀರದಲ್ಲಿ ಹಗರಿಬೊಮ್ಮನಹಳ್ಳಿ ಕ್ರಿಯಾಶೀಲ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಡಾ.ಮಹೇಶ್ವರ ಸ್ವಾಮೀಜಿಯವರಿಗೆ ಸನ್ಮಾನಿಸಿ ಅವರು ಮಾತನಾಡಿದರು, ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳಷ್ಟೇ ಅಲ್ಲದೇ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ, ಪ್ರತೀ ವರ್ಷ ಸಾಹಿತಿಗಳಿಗೆ, ಬರಹಗಾರರಿಗೆ ಪ್ರೋತ್ಸಾಹ ನೀಡಲು ನುಡಿಹಬ್ಬ ಕಾರ್ಯಕ್ರಮಗಳನ್ನು ಸಹ ಆಯೋಜಿಸಿ ನಾಡು-ನುಡಿ, ಭಾಷೆ ಹಾಗೂ ರೈತಪರ ಹೋರಾಟಗಳನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿ ಚಿಂತಕರಾಗಿದ್ದಾರೆ. ಶ್ರೀಮಠದಿಂದ ಪ್ರತೀ ವರ್ಷ ಕಣ್ಣಿನ ಚಿಕಿತ್ಸೆ, ರಕ್ತದಾನ, ಸಾಮೂಹಿಕ ವಿವಾಹ, ಟಗರಿನ ಕಾಳಗ, ಕೃಷಿಮೇಳ, ದತ್ತಿ ಉಪನ್ಯಾಸಗಳನ್ನು ಆಯೋಜಿಸಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ. ಮಹೇಶ್ವರ ಸ್ವಾಮೀಜಿಗಳ ಕಾರ್ಯವೈಖರಿಯನ್ನು ದಾಖಲಿಸಿ ಗೌರವ ಡಾಕ್ಟರೇಟ್ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.ಈ ಸಂದರ್ಭದಲ್ಲಿ ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ಹೆಚ್.ನಾಗರಾಜ, ನೆಲ್ಕುದ್ರಿ ಪತ್ರೆಪ್ಪ, ಕೊಟ್ರೇಶ್, ಬಿ.ಕೊಟ್ರಪ್ಪ, ಕೆ.ಗುರುಬಸವರಾಜ, ಎಸ್.ಹೆಚ್.ಎನ್.ವೀರಯ್ಯ, ಶ್ರೀನಿವಾಸ್ ರೆಡ್ಡಿ ಇತರರಿದ್ದರು.