ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಟ್ಟೂರರನ್ನು ಗೆಲ್ಲಿಸಲು ಶಾಸಕ ಭೀಮಾನಾಯ್ಕ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ,
ಬಳ್ಳಾರಿ ಜಿಲ್ಲೆ:
ಹಗರಿಬೊಮ್ಮನಹಳ್ಳಿ :ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಇತ್ಯರ್ಥಗೊಳಿಸದಷ್ಟು ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿದೆ. ಈ ಬಾರಿಯ ಈಶಾನ್ಯ ವಲಯದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರರಿಗೆ ಮತ ನೀಡಿ ಬೆಂಬಲಿಸಿ ಎಂದು ಶಾಸಕ ಭೀಮಾನಾಯ್ಕ ಮತಯಾಚಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಈಶಾನ್ಯ ವಲಯದ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು, ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಹಬೊಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 100ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ನಾನೂ ಸಹಿತ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿ ಸ್ಮಾರ್ಟ್‍ಕ್ಲಾಸ್, ಶಾಲಾ ಕೊಠಡಿಗಳು, ವಸತಿ ನಿಲಯಗಳು, ಶೌಚಗೃಹಗಳು, ಕಾಂಪೌಂಡ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕಿರುವ ಶಿಕ್ಷಣದ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇಲ್ಲ. ಈ ಬಾರಿಯ ಎಂಎಲ್ಸಿ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರರಿಗೆ ಮತ ನೀಡಿ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಕಳುಹಿಸಬೇಕು. ಮುಂದಿನ ದಿನಗಳಲ್ಲಿ ಶಿಕ್ಷಕರ ವರ್ಗಾವಣೆ, ಎನ್‍ಪಿಎಸ್ ಕುರಿತ ಸಮಸ್ಯೆಗಳನ್ನು ಪರಿಹರಿಸಲು ಮಟ್ಟೂರರಿಗೆ ಸಾಥ್ ನೀಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪರ ಕಾರ್ಯಕರ್ತರು ಮತದಾರರನ್ನು ಮನವೊಲಿಸಿ ಮತ ನೀಡುವಂತೆ ಜಾಗೃತಿ ಮೂಡಿಸಬೇಕು. ಶಿಕ್ಷಣ ಚಿಂತಕ ಶರಣಪ್ಪ ಮಟ್ಟೂರರವರು ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ಅವರು ಒಳ್ಳೆಯ ಕಾನೂನು ಸಲಹೆಗಾರಾಗಿದ್ದು, ಶಿಕ್ಷಕರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಶೈಕ್ಷಣಿಕ ಅಭಿವೃದ್ಧಿ ಮಟ್ಟೂರವರ ಗೆಲುವಿಗೆ ಪೂರಕವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಗೋನಾಳ್ ವಿರೂಪಾಕ್ಷಗೌಡ, ವಕೀಲ ಬಿ.ವಿ.ಶಿವಯೋಗಿ, ಜಿ.ಪಂ ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ, ಕಾಂಗ್ರೆಸ್ ಮುಖಂಡರಾದ ಹಾಲ್ದಾಳ್ ವಿಜಯಕುಮಾರ್, ಹುಡೇದ ಗುರುಬಸವರಾಜ, ಡಿಶ್ ಮಂಜುನಾಥ, ಕನ್ನಿಹಳ್ಳಿ ಚಂದ್ರಶೇಖರ, ಗುಂಡ್ರು ಹನುಮಂತಪ್ಪ, ಬಾಲಕೃಷ್ಣ ಬಾಬು, ಶೇಕ್ ಅಹ್ಮದ್, ಅಜೀಜುಲ್ಲಾ, ಕುಲ್ಮಿ ರೆಹಮಾನ್, ತುರಾಯಿ, ಹಂಚಿಮನಿ ರಮೇಶ್, ಜಂದಿ ಸಾಬ್ ಮತ್ತಿತರರಿದ್ದರು.

Share and Enjoy !

Shares