ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಒತ್ತಾಯ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ,
ಬಳ್ಳಾರಿ ಜಿಲ್ಲೆ:

ಹಗರಿಬೊಮ್ಮನಹಳ್ಳಿ :
ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರದ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕ ಹಾಗೂ ತಾಲೂಕು ಯುವ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಶರಣಮ್ಮರಿಗೆ ಮನವಿ ಸಲ್ಲಿಸಿದರು.ಬಳಿಕ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಸಂಚಿ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸಮುದಾಯದಲ್ಲಿ ಬಹುತೇಕರು ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿಕರು ಹಾಗೂ ಶ್ರಮಿಕ ವರ್ಗದ ಕಾರ್ಮಿಕರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದು ಸಮಾಜಕ್ಕೆ ಅನ್ಯಾಯವಾಗಿದೆ. ಈಗಾಗಲೇ ಪಂಚಮಸಾಲಿ ಸಮಾಜದ ಹರಿಹರ ಪೀಠದ ವಚನಾನಂದ ಮಹಾಸ್ವಾಮೀಜಿ ಹಾಗೂ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಸರ್ಕಾರಕ್ಕೆ ಮನವಿಮಾಡಿಕೊಳ್ಳುವ ಮೂಲಕ ಮೀಸಲಾತಿ ನೀಡುವಂತೆ ಧ್ವನಿ ಎತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಪಾಲಿಸಿದರೆ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಯುವ ಘಟಕದ ತಾಲೂಕು ಅಧ್ಯಕ್ಷ ಗುರು ಸೊನ್ನದ್ ಮಾತನಾಡಿ, ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸರ್ಕಾರದಿಂದ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಗ್ರಾಮೀಣ ಭಾಗದ ಕೃಷಿಕರು ಹಾಗೂ ವಿದ್ಯಾವಂತ ನಿರುದ್ಯೋಗಿಗಳು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ನಿರಾಸಕ್ತಿ ಹೊಂದಿದ್ದಾರೆ. ಶೀಘ್ರವೇ ರಾಜ್ಯ ಸರ್ಕಾರ ಪರಿಶೀಲಿಸಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕಿದೆ. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಎಂ.ಗುರುಬಸವರಾಜ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಂಡಿಹಳ್ಳಿ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ನಟರಾಜ್ ಬದಾಮಿ, ಉಪಾಧ್ಯಕ್ಷರಾದ ಫೋಟೋ ವೀರೇಶ್, ಎಸ್.ಎ.ಸಂತೋಷ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚನ್ನವೀರ, ಕಾರ್ಯದರ್ಶಿ ಯುವರಾಜ್, ಮುಖಂಡರಾದ ಕರಿಬಸವರಾಜ್ ಬದಾಮಿ, ಎಸ್.ಬಿ.ಶಂಭುನಾಥ, ವೀರಣ್ಣ ಮೆಣಸಿಗಿ, ಕೊಟ್ರಗೌಡ ಪಾಟೀಲ್, ಭದ್ರವಾಡಿ ಸುರೇಶ್, ಶ್ರೀಧರ್ ಗಂಡಿ, ರುದ್ರೇಶ್, ನೌಕರರ ಘಟಕದ ಸಿ.ರವಿ, ಶಿವಕುಮಾರ್ ಗೌಡ, ಇಟಿಗಿ ಮಂಜುನಾಥ, ಎಂ.ಜಿ.ಮಂಜುನಾಥ ಇತರರಿದ್ದರು.

Share and Enjoy !

Shares