ವಿಜಯನಗರವಾಣಿ ಸುದ್ದಿ
ಬಳ್ಳಾರಿಜಿಲ್ಲೆ
ಕಂಪ್ಲಿ: ಭಾರಿ ಕುತೂಹಲ ಕೆರಳಿಸಿದ್ದ, ರಾಜಕೀಯ ನಾಯಕರ ಜಿದ್ದಾಜಿದ್ದಿನ ಕಣವಾಗಿದ್ದ ಪಟ್ಟಣದ ಪುರಸಭೆ ಆಡಳಿತದ ಗದ್ದುಗೆ ಶುಕ್ರವಾರ ಬಿಜೆಪಿ ಪಾಲಾಗಿದೆ.
ಬಹುಮತದ ಬಿಜೆಪಿಯು ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ಗೆ ಸೆಡ್ಡು ಹೊಡೆದಿದೆ.
ನೂತನ ಅಧ್ಯಕ್ಷೆಯಾಗಿ ವಿ.ಶಾಂತಲಾ ಹಾಗೂ ಉಪಾಧ್ಯಕ್ಷೆಯಾಗಿ ಕೆ.ನಿರ್ಮಲ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ) ಮೀಸಲಾಗಿತ್ತು. ಈ ಎರಡು ಮೀಸಲಾತಿ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 1:15 ಗಂಟೆ ಒಳಗಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವಿ.ಶಾಂತಲಾ ಹಾಗೂ ಕಾಂಗ್ರೆಸ್ ನಿಂದ ಸುಶೀಲಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೆ.ನಿರ್ಮಲ ಹಾಗೂ ಕಾಂಗ್ರೆಸ್ ನಿಂದ ಎಂ.ಉಸ್ಮಾನ್ ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರಗಳ ಪರಿಶೀಲನೆ ನಡೆಯಿತು. ತದನಂತರ ನಾಮಪತ್ರ ಹಿಂಪಡೆಯಲು ಕೆಲ ನಿಮಿಷ ಕಾಲವಕಾಶದಲ್ಲಿ ಯಾರು ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆಗೆ ಸಾಕ್ಷಿಯಾಯಿತು. ನಂತರ ನಡೆದ ಚುನಾವಣೆಯಲ್ಲಿ 13 ಜನ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ವಿ.ಶಾಂತಲಾ ಅವರು ನೂತನ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಕೆ.ನಿರ್ಮಲ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಗೌಸಿಯಾಬೇಗಂ ಘೋಷಿಸಿದರು.ಈ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಪಕ್ಷದ ಪುರಸಭೆ ಸದಸ್ಯರಾದ ಡಾ.ವಿ.ಎಲ್.ಬಾಬು, ಸಿ.ಆರ್.ಹನುಮಂತ, ಎನ್.ರಾಮಾಂಜಿನೀಯಲು, ಎಸ್.ಎಂ.ನಾಗರಾಜ,ಟಿ.ವಿ.ಸುದರ್ಶನ, ಆರ್.ಆಂಜಿನೇಯ್ಯ, ರಮೇಶ ಹೂಗಾರ,ಹೆಚ್.ಹೇಮಾವತಿ, ತಿಮ್ಮಕ್ಕ, ಪಾರ್ವತಿ, ಯು.ಗಂಗಮ್ಮ ಹಾಗೂ
ಕಾಂಗ್ರೆಸ್ ಸದಸ್ಯರಾದ ಭಟ್ಟ ಪ್ರಸಾದ್, ಕೆ.ಎಸ್.ಚಾಂದಭಾಷಾ,ವೀರಾಂಜಿನೀಯಲು, ಲೊಡ್ಡು ಹೊನ್ನೂರವಲಿ, ಮೌಲಾ, ನಾಗಮ್ಮ, ಜಿ.ಸುಮಾ, ಗುಡದಮ್ಮ ಇದ್ದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ತಹಶೀಲ್ದಾರರು ಹಾಗೂ ಪುರಸಭೆವತಿಯಿಂದ ಮಾಲಾರ್ಪಣೆಯೊಂದಿಗೆ ಸನ್ಮಾನಿಸಲಾಯಿತು.
ಸಿಪಿಐ ಸುರೇಶ್ ತಳವಾರ್, ಪಿಎಸ್ಐ ಮೌನೇಶ್ ರಾಥೋಡ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಕುತುಹಲದ ಪುರಸಭೆಗೆ ಆಯ್ಕೆಗೊಂಡ ಬಿಜೆಪಿ ಬೆಂಬಲಿತ ಸದಸ್ಯರಾದ ವಿ.ಶಾಂತಲಾ ವಿದ್ಯಾಧರ(ಅಧ್ಯಕ್ಷೆ), ಕೆ.ನಿರ್ಮಲ ವಸಂತಕುಮಾರ್(ಉಪಾಧ್ಯಕ್ಷೆ) ಇವರಿಗೆ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು, ಕಂಪ್ಲಿ ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವಿರೇಶ್ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಹೂಮಾಲೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ: ಬಿಜೆಪಿ ಪುರಸಭೆ ಅಧಿಕಾರ ಹಿಡಿದ ಹಿನ್ನಲೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಸನ್ಮಾನ: ಪುರಸಭೆ ಗದ್ದುಗೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಹಾಗೂ ಹಿರಿಯ ಮುಖಂಡರಿಗೆ ಬೃಹತ್ ಹೂಮಾಲೆ ಹಾಕಿ ಅಭಿನಂದಿಸಿದರು.