ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :ನೂತನ ವಿಜಯನಗರ ಜಿಲ್ಲೆಯನ್ನು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಬೌಗೋಳಿಕವಾಗಿ ಮಧ್ಯ ಭಾಗದಲ್ಲಿರುವ ಹಗರಿಬೊಮ್ಮನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರ ಸ್ಥಾನವನ್ನಾಗಿಸಬೇಕು ಎಂದು ಶಾಸಕ ಭೀಮಾನಾಯ್ಕ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ಅಖಂಡ ಬಳ್ಳಾರಿ ಕೂಗಿಗೆ ನನ್ನ ಬೆಂಬಲವಿದೆ. ಆದರೆ ಜಿಲ್ಲೆಯ ಪಶ್ಚಿಮ ತಾಲೂಕಿನ ಜನಸಾಮಾನ್ಯರಿಗೆ, ರೈತರಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಶಿಕ್ಷಕರಿಗೆ ಆಡಳಿತಾತ್ಮಕ ಕೆಲಸಗಳಿಗೆ ಬಳ್ಳಾರಿಗೆ ಬಂದು ಹೋಗಲು ಸಮಸ್ಯೆಯಾಗುವ ಹಿನ್ನಲೆಯಲ್ಲಿ ಜಿಲ್ಲಾ ವಿಭಜನೆ ಅನಿವಾರ್ಯವಾಗಿದೆ. ವಿಜಯನಗರ ಜಿಲ್ಲೆ ರಚನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪುನರ್‍ಪರಿಶೀಲಿಸಬೇಕು. ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕುಗಳಾದ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ ತಾಲೂಕುಗಳನ್ನು ಸೇರಿಸಬೇಕಿತ್ತು. ಆದರೆ ಅವೈಜ್ಞಾನಿಕವಾಗಿ ಜಿಲ್ಲೆ ರಚನೆಗೆ ಮುಂದಾಗಿರುವುದು ಬೇಸರ ಮೂಡಿಸಿದೆ. ಈ ಭಾಗದ ಶಾಸಕರ ಅಭಿಪ್ರಾಯ ಪಡೆದು ತೀರ್ಮಾನಿಸಬೇಕಿತ್ತು. ಮುಂದಿನ ದಿನಗಳಲ್ಲಿ ಪಶ್ಚಿಮ ತಾಲೂಕಿನ ವಿವಿಧ ಸಂಘಟನೆಗಳ ಅಭಿಪ್ರಾಯ ಕಲೆಹಾಕಿ ಹೋರಾಟಕ್ಕೆ ಮುಂದಾಗಲಿದ್ದೇನೆ ಎಂದರು.ಇದೇ ವೇಳೆ ಪುರಸಭೆ ಅಧ್ಯಕ್ಷೆ ಕವಿತಾ ಹಾಲ್ದಾಳ್, ಉಪಾಧ್ಯಕ್ಷ ಹುಳ್ಳಿ ಮಂಜುನಾಥ ಅಧಿಕಾರ ಸ್ವೀಕರಿಸಿದರು. ಶಾಸಕ ಭೀಮಾನಾಯ್ಕ, ಅವರ ಪತ್ನಿ ಗೀತಾ ಭೀಮಾನಾಯ್ಕ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಹುಲ್ಮನಿ ನೀಲಮ್ಮ, ಜರೀನಾ ಬೇಗಂ, ಜಹಿದಾ ರೆಹಮಾನ್, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪವಾಡಿ ಹನುಮಂತಪ್ಪ, ಹಾಲ್ದಾಳ್ ವಿಜಯಕುಮಾರ್, ಹಾಲ್ದಾಳ್ ಮಲ್ಲಣ್ಣ, ಹುಡೇದ್ ಗುರುಬಸವರಾಜ, ಕನ್ನಿಹಳ್ಳಿ ಚಂದ್ರಶೇಖರ್ ಇತರಿದ್ದರು.