ವಿಜಯನಗರವಾಣಿ ಸುದ್ದಿ:
ಹಗರಿಬೊಮ್ಮನಹಳ್ಳಿ :
ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳ ಮೂಲಕ ಮಕ್ಕಳ ಕಲಿಕೆಗೆ ಪ್ರೇರೇಪಿಸಿ ಆಸಕ್ತಿ ಮೂಡಿಸಬೇಕು ಎಂದು ಶಾಲಾಪೂರ್ವ ಶಿಕ್ಷಣ ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ಕೊಟ್ರೇಶ್ ಯರಡಕೇರಿ ಹೇಳಿದರು.
ತಾಲೂಕಿನ ಹಂಪಸಾಗರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾಪೂರ್ವ ಶಿಕ್ಷಣ ಬಲವರ್ಧನಾ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಗೆ ಸಂಬಂಧಿಸಿದಂತೆ ಇದು 3ನೇ ಹಂತದ ತರಬೇತಿ ಆಗಿದ್ದು, ಮಕ್ಕಳಲ್ಲಿ ಭಾಷಾ ಬೆಳವಣಿಗೆ, ಓದುವ, ಬರವಣಿಗೆ, ಗಣಿತ ಪೂರ್ವ ತಯಾರಿ ಹಾಗೂ ದೈಹಿಕ ಬೆಳವಣಿಗೆಗೆ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿಯನ್ನು ನೀಡಲಾಗಿದೆ. ಕಾರ್ಯಕರ್ತೆಯರು ವಿಷಯ ಚಟುವಟಿಕೆಗಳನ್ನು ಮಕ್ಕಳಿಗೆ ಮುಟ್ಟಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಪ್ರಸ್ತುತ ತರಬೇತಿಯ ವಿಷಯಗಳನ್ನು ಕಲಿತು ಚಟುವಟಿಕೆಗೆ ಸಂಬಂಧಿಸಿದಂತೆ ಕೆಕೆಆರ್‍ಡಿಬಿ ಮತ್ತು ಟಾಟಾ ಟ್ರಸ್ಟ್‍ನ ಸಹಯೋಗದಲ್ಲಿ ಜಿಲ್ಲಾಡಳಿತದಿಂದ 35 ಆಟಿಕೆ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಈಗಾಗಲೇ ನೀಡಲಾಗಿದೆ. ಸ್ಥಳೀಯವಾಗಿ ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕು ಎಂದರು.
ಇದೇ ವೇಳೆ ಹಂಪಸಾಗರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮರಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಯೋಜನಾಧಿಕಾರಿ ಉಮೇಶಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ನಾಗರತ್ನ.ವೈ.ಇಟಗಿ ತರಬೇತಿ ವಿಷಯಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಹಂಪಸಾಗರ ಸ.ಹಿ.ಪ್ರಾ.ಶಾಲೆಯ ಮುಖ್ಯಗುರುಗಳು, ಅಂಗನವಾಡಿ ಕಾರ್ಯಕರ್ತೆಯರಾದ ಮಾಲಿನಿ, ಶ್ಯಾಭೀರ, ಸುಶೀಲ ಮತ್ತಿತರರಿದ್ದರು