ವಿಶ್ವ ವಿಕಲಚೇತನರ ದಿನ ಆಚರಣೆ ವಿಕಲಚೇತನರಿಗೆ ಅನುಕಂಪ ಬೇಡ;ಸಮಾನ ಅವಕಾಶವಿರಲಿ:ಎಡಿಸಿ ಮಂಜುನಾಥ

Share and Enjoy !

Shares
Listen to this article

ಬಳ್ಳಾರಿ,ಡಿ.05 : ವಿಕಲಚೇತನರಿಗೆ ಅನುಕಂಪದಿಂದ ನೋಡದೇ ಅವರಿಗೆ ಎಲ್ಲರಂತೆಯೇ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನೂ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ‌ಪಿ.ಎಸ್.ಮಂಜುನಾಥ ಹೇಳಿದರು.
ಜಿಲ್ಲಾಡಳಿತ, ಜಿಪಂ,ಜಿಲ್ಲಾ ಕಾನೂನು ಸೇವೆಗಳ‌ ಪ್ರಾಧಿಕಾರ,ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಎದುರುಗಡೆಯ ಶಾದಿಮಹಲ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ‌ಚಾಲನೆ ನೀಡಿ ಅವರು ಮಾತನಾಡಿದರು.
ವಿಕಲಚೇತನತನೆ ಎಂಬುದು ಕೇವಲ ದೇಹ ಮತ್ತು ಮೆದುಳಿಗೆ ಇರುವಂತದಲ್ಲ. ಹೃದಯ ವೈಶಾಲ್ಯತೆ ಇರದವರು ನಿಜವಾದ ವಿಕಲಚೇತನರೆಂದು ಹೇಳಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ವಿಕಲಚೇತನರು ಸಾಹಿತ್ಯ,ಸಂಗೀತ,ಕ್ರೀಡೆ, ಶಿಕ್ಷಣ, ರಾಜಕೀಯ,ವಿಜ್ಞಾನ ಸೇರಿದಂತೆ ‌ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ‌ಮೂಡುವುದರ‌ ಮೂಲಕ ಜಗತ್ತು ‌ನಿಬ್ಬೆರಗಾಗುವಂತೆ ಮಾಡಿದ್ದಾರೆ ಎಂದರು.
ವಿಕಲಚೇತನರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ. ವಿಕಲಂಗರು ಸಮಾಜಕ್ಕೆ ಹೊರೆಯಲ್ಲ, ಅವರು ಸಮಾಜದ ಆಸ್ತಿಗಳೆಂಬುದನ್ನು ಪೋಷಕರು ಸೇರಿದಂತೆ ನಾವೆಲ್ಲರೂ ಗಮನಿಸಬೇಕು ಎಂದರು.
ವಿಕಲಚೇತನರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅದರಲ್ಲೂ ವಿಶೇಷವಾಗಿ ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ತೋರುತ್ತಿದ್ದಾರೆ ಎಂದರು.
ವಿಕಲಚೇತನರ ಕಲ್ಯಾಣಕ್ಕೆ ಸರಕಾರವು ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ ಶ್ರಮಿಸುತ್ತಿದ್ದು,ಇದರ ಪ್ರಯೋಜನವನ್ನು ತಾವು ಪಡೆದುಕೊಳ್ಳಬೇಕು ಎಂದರು.
ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಕುರಿತು ಪ್ಯಾನೆಲ್ ವಕೀಲರಾದ ನಾಸಿರುದ್ದೀನ್ ಅವರು‌ ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ ಅವರು ಸರ್ವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಕೆಎಎಸ್ ಅಧಿಕಾರಿ ಅಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.
ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಇದ್ದರು. ಬಸವರಾಜ ಅಮಾತಿ ನಿರೂಪಿಸಿದರು.

Share and Enjoy !

Shares