ದಾವಣಗೆರೆ ಡಿ. 05.ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಾಗೂ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿ ನಿರ್ಮೂಲನೆ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಕಳ್ಳಭಟ್ಟಿ ನಿರ್ಮೂಲನೆ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದ್ಯ ಗ್ರಾಮ ಪಂಚಾಯತ್ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಳ್ಳಭಟ್ಟಿ ಸಾರಾಯಿ, ಅಕ್ರಮ ಮದ್ಯ ಮಾರಾಟ, ಮಾದಕ ವಸ್ತುಗಳ ಸಾಗಾಣಿಕೆ ತಡೆಗಟ್ಟುವುದು ಅತಿ ಅವಶ್ಯಕವಾಗಿರುತ್ತದೆ. ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಅಲ್ಲಲ್ಲಿ ಗಾಂಜಾ ಬೆಳೆ ಕುರಿತು ಅಲ್ಲಲ್ಲಿ ದೂರುಗಳು ಕೇಳಿಬರುತ್ತಿವೆ. ಜನಸ್ಪಂದನ ಸಭೆಗಳಲ್ಲಿ ಗ್ರಾಮಗಳಲ್ಲಿ ಇಂತಹ ದೂರುಗಳು ಬರುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಈ ತಿಂಗಳ ಒಳಗಾಗಿ ವಿಶೇಷ ಜಂಟಿಕಾರ್ಯಾಚರಣೆ ನಡೆಸಿ, ಎಲ್ಲೆಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ, ಅಬಕಾರಿ ಕಾಯ್ದೆ ಉಲ್ಲಂಘನೆ ಸೇರಿದಂತೆ ಪ್ರಕರಣಗಳನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಆಕಸ್ಮಿಕ ದಾಳಿ ಪ್ರಕರಣಗಳನ್ನು ಹೆಚ್ಚಿಸಬೇಕು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಡಾಬಾ ಗಳು, ಮಾಂಸಾಹಾರಿ ಹೋಟೆಲ್‍ಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಗ್ರಾಮಗಳು, ತಾಂಡಾಗಳಲ್ಲಿ ಎಲ್ಲೆಲ್ಲಿ ಕಳ್ಳಭಟ್ಟಿ ಸಾರಾಯಿ, ಮಾಂಸಾಹಾರ ಡಾಬಾ, ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುತ್ತದೆ ಎನ್ನುವ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದೇ ಇರುತ್ತದೆ. ಹೀಗಾಗಿ ಮಾಹಿತಿದಾರರಿಂದ ವಿವರ ಸಂಗ್ರಹಿಸಿ, ಗ್ರಾಮ ಹಾಗೂ ತಾಂಡಾಗಳ ಮೇಲೆ ದಾಳಿ ನಡೆಸಬೇಕು. ಗ್ರಾಮ ಪಂಚಾಯತ್ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ, ಅಬಕಾರಿ ಇಲಾಖೆಯವರು ದಿನನಿತ್ಯ ನಡೆಸಿದ ದಾಳಿ ವಿವರ, ವಶಕ್ಕೆ ಪಡೆದ ಕಳ್ಳಭಟ್ಟಿ, ಮದ್ಯ, ಗಾಂಜಾ ಮುಂತಾದ ಸಾಮಗ್ರಿಗಳ ಅಂಕಿ-ಅಂಶಗಳ ವಿವರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸರ್ಕಾರಿ ಸೌಲಭ್ಯ ಹಿಂಪಡೆಯಲು ಕ್ರಮ :
*********** ಕಳ್ಳಭಟ್ಟಿ ಸಾರಾಯಿ ತಯಾರಿಸುವುದು ಹಾಗೂ ಮಾರಾಟ ಮಾಡುವುದು ಕಾನೂನು ರಿತ್ಯಾ ಅಪರಾಧವಾಗಿದ್ದು, ಈಗಾಗಲೆ ಅಬಕಾರಿ ಇಲಾಖೆಯವರಲ್ಲಿ ಕಳ್ಳಭಟ್ಟಿ ತಯಾರಕರು ಹಾಗೂ ಈ ಹಿಂದೆ ಅಪರಾಧ ಎಸಗಿದವರ ಮಾಹಿತಿ ಲಭ್ಯವಿರುತ್ತದೆ. ಪದೇ ಪದೇ ಕಾನೂನು ಉಲ್ಲಂಘಿಸಿ, ಕಳ್ಳಭಟ್ಟಿ ತಯಾರಿಕೆಯನ್ನು ಮುಂದುವರೆಸಿರುವುದು ಕಂಡುಬಂದಲ್ಲಿ, ಅಂತಹವರಿಗೆ ಸರ್ಕಾರದಿಂದ ನೀಡಲಾಗಿರುವ ಪಡಿತರ ಚೀಟಿಯೂ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು, ಅಂತಹ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮದ್ಯ ಅಕ್ರಮ ತಡೆಗೆ ಕಂಟ್ರೋಲ್ ರೂಂ :
ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಪ್ರಕರಣಗಳನ್ನು ಪತ್ತೆಹಚ್ಚಿ, ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಅಬಕಾರಿ ಇಲಾಖೆಯು ಕಂಟ್ರೋಲ್ ರೂಂ ಸ್ಥಾಪಿಸಿದ್ದು, 08192-235316 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಕುರಿತಂತೆ ಮಾಹಿತಿ ಇದ್ದಲ್ಲಿ, ಕಂಟ್ರೋಲ್ ರೂಂ ದೂರವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ನಿಯಮ ಉಲ್ಲಂಘನೆಗಾಗಿ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್‍ಗಳಿಗೆ ಸಂಬಂಧಿಸಿದಂತೆ 710 ಪ್ರಕರಣ ದಾಖಲಿಸಿ 8.95 ಲಕ್ಷ ರೂ. ದಂಡ ಸಂಗ್ರಹಿಸಲಾಗಿತ್ತು. ಈ ವರ್ಷ 280 ಪ್ರಕರಣ ದಾಖಲಿಸಿ 2.78 ಲಕ್ಷ ದಂಡ ವಸೂಲಾಗಿದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಎಸ್. ಶಿವಪ್ರಸಾದ್ ಹೇಳಿದರು.
ನಿಯಮ ಉಲ್ಲಂಘಿಸಿದರೆ ಡಾಬಾ ಮುಚ್ಚಿಸಿ :
ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಾಜ್ಯ ಹೆದ್ದಾರಿ ಬದಿಗಳಲ್ಲಿರುವ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿರುವ ಬಗ್ಗೆ ಹಾಗೂ ಮದ್ಯ ಸೇವಿಸಿ ತೀವ್ರ ಸ್ವರೂಪದ ಗಲಾಟೆ, ಮಾರಾಮಾರಿ ನಡೆಯುತ್ತಿರುವ ದೂರುಗಳಿದ್ದು, ಜಿಲ್ಲೆಯ ಎಲ್ಲಾ ಡಾಬಾಗಳ ಮೇಲೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ನಿಯಮ ಉಲ್ಲಂಘನೆ ನಡೆಯುತ್ತಿರುವುದು ಕಂಡುಬಂದರೆ ಕೂಡಲೆ ಅಂತಹವರ ಮೇಲೆ ಪ್ರಕರಣ ದಾಖಲಿಸುವುದು ಮಾತ್ರವಲ್ಲದೆ, ಅಂತಹ ಡಾಬಾ ಮುಚ್ಚಿಸಲು ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು, ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಅಬಕಾರಿ ಇಲಾಖೆಗೆ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಎಸ್. ಶಿವಪ್ರಸಾದ್ ಸೇರಿದಂತೆ ಅಬಕಾರಿ ಇಲಾಖೆ ಜಿಲ್ಲಯ ಎಲ್ಲ ವಿಭಾಗಗಳ ಅಬಕಾರಿ ಉಪನಿರೀಕ್ಷಕರು, ಅಬಕಾರಿ ನಿರೀಕ್ಷಕರು ಪಾಲ್ಗೊಂಡಿದ್ದರು