ಗೃಹರಕ್ಷಕ ದಳ ದಿನ ಆಚರಣೆ ಗೃಹರಕ್ಷಕದಳದ ನಿಸ್ವಾರ್ಥ ಸೇವೆಗೆ ಎಸ್ಪಿ ಸೈದುಲು ಅಡಾವತ್ ಶ್ಲಾಘನೆ

Share and Enjoy !

Shares

 

ಬಳ್ಳಾರಿ, ಡಿ.06: ಗೃಹರಕ್ಷಕದಳದ ಸಿಬ್ಬಂದಿ ಪೊಲೀಸ್ ಇಲಾಖೆಯ ಜೊತೆಗೆ ಸೇರಿಕೊಂಡು ಸಮಾಜ ಮತ್ತು ಜನರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಗೃಹರಕ್ಷಕ ದಳದ ನಿಸ್ವಾರ್ಥ ಸೇವೆ‌ ಅತ್ಯಂತ ಅಮೂಲ್ಯ ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿದರು.
ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಗೃಹರಕ್ಷಕ ‌ದಿನಾಚರಣೆ ನಿಮಿತ್ತ ನಗರದ ಗೃಹರಕ್ಷಕ ದಳದ‌ ಕಚೇರಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಜೊತೆಗೆ ಸಹಾಯಕ ಪಡೆಯಾಗಿ ಇಂದಿಗೂ ಮಹತ್ವದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ಎಸ್ಪಿ ಸೈದುಲು ಅಡಾವತ್ ಅವರು ಸಮಾಜದಲ್ಲಿ ಅಹಿತಕರ ಘಟನೆಗಳು ಬಂದಾಗ ರಕ್ಷಣೆಗೆ ಒಂದು ತುಕಡಿ ಇರಬೇಕು ಅಂತ ಗೃಹರಕ್ಷಕ ದಳವನ್ನು ದೇಶದಲ್ಲಿ 1946ರಲ್ಲಿ ರಚಿಸಲಾಯಿತು. ಪೊಲೀಸ್ ಪಡೆಗೆ ಸಹಾಯಕ ಪಡೆಯಾಗಿ ಸಮಾಜ ಮತ್ತು ಜನರ ಅಂದಿನಿಂದ‌ ಇಂದಿನವರೆಗೆ ರಕ್ಷಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
6 ಲಕ್ಷ ಗೃಹರಕ್ಷಕ ದಳದ ಸಿಬ್ಬಂದಿ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್,ರಕ್ಷಣಾ ಕ್ಷೇತ್ರದಲ್ಲಿನ ಸಿಬ್ಬಂದಿ ಶಿಸ್ತು, ಪ್ರೇರಣೆ ಮತ್ತು ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿದಂತೆ ಗೃಹರಕ್ಷಕದಳದ ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಗೃಹರಕ್ಷಕ ದಳದ ದಿನಾಚರಣೆಯು ಗೃಹರಕ್ಷಕ ದಳದ ನಿಸ್ವಾರ್ಥ ಸೇವೆಯನ್ನು ಜನರಿಗೆ ತಿಳಿಸುವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ ಎಸ್ಪಿ ಸೈದುಲು ಅಡಾವತ್ ಅವರು ಬಳ್ಳಾರಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ;
ತಮ್ಮ ಕೆಲಸದ ಜೊತೆಗೆ ಇನ್ನೀತರ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 7ವರ್ಷಗಳ ನಿರಂತರವಾಗಿ ಸಮಗ್ರ ಚಾಂಪಿಯನ್ ಶಿಪ್ ಬಳ್ಳಾರಿಗೆ ಸಂದಿರುವುದು ಹೆಮ್ಮೆಯ ಸಂಗತಿ;ಮುಂದೆಯೂ ಇದೇ ರೀತಿ ಸಾಗಲಿ ಎಂದು ಆಶಿಸಿದರು.
ಗೃಹ ರಕ್ಷಕ ದಳದ ದಿನಾಚರಣೆ ಸೇರಿದಂತೆ ತಮ್ಮ ಈ ರೀತಿಯ ಯಾವುದೇ ಕಾರ್ಯಕ್ರಮಗಳಿರಲಿ ಪೊಲೀಸ್ ಸಿಬ್ಬಂದಿಯನ್ನು ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ಹೇಳಿದ ಅವರು ಅತ್ಯಂತ ಆತ್ಮವಿಶ್ವಾಸದಿಂದ ಸದಾ ಕಾರ್ಯನಿರ್ವಹಿಸಿ ಎಂದು ಗೃಹರಕ್ಷಕ ದಳದ ಸಿಬ್ಬಂದಿಗೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಮಾತನಾಡಿ, ಗೃಹರಕ್ಷಕದಳವು ದೇಶದಲ್ಲಿ ಆರಂಭವಾದಾಗಿನಿಂದ‌ ಇಲ್ಲಿಯವರೆಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತನ್ನದೇ ಸೇವೆ ಒದಗಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಹಂಪಿ ಉತ್ಸವ, ಚುನಾವಣೆ ಮತ್ತು ವಿಪತ್ತುಗಳ‌ ಸಂದರ್ಭದಲ್ಲಿ ಸೇರಿದಂತೆ ಸಂಕಷ್ಟದ ಸಂದರ್ಭದಲ್ಲಿ ಉತ್ತಮ‌ ಸೇವೆ ಸಲ್ಲಿಸಿದ‌ ಶ್ರೇಯಸ್ಸು ಬಳ್ಳಾರಿ ಗೃಹರಕ್ಷಕ ದಳಕ್ಕೆ‌ ಸಲ್ಲುತ್ತದೆ. ಬಳ್ಳಾರಿ ಗೃಹರಕ್ಷಕ ದಳವು ತಮ್ಮ ನಿಸ್ವಾರ್ಥ‌ ಮನೋಭಾವದ‌ ಅತ್ಯುತ್ತಮ ಕಾರ್ಯವನ್ನು ಅನ್ಯಜಿಲ್ಲೆಗಳಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದ ಸಂದರ್ಭದಲ್ಲಿನ ರಕ್ಷಣಾ ಕಾರ್ಯದಲ್ಲಿ‌ ಭಾಗಿಯಾಗಿರುವುದು ಗಮನಿಸಬಹುದು‌‌ ಎಂದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಎಂ.ಎ.ಷಕೀಬ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹರಕ್ಷಕದಳದ ಉಪಸಮಾದೇಷ್ಟರಾದ ಬಿ.ಎಸ್.ಕಾಂಬಳೆ ಸ್ವಾಗತಿಸಿದರು. ಬೋಧಕರಾದ ಎಚ್.ತಿಪ್ಪೇಸ್ವಾಮಿ ಅವರು‌ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಗೃಹರಕ್ಷಕದಳದ‌ ವಾರ್ಷಿಕ ವರದಿ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಘಟಕಾಧಿಕಾರಿಗಳು,ಸಿಬ್ಬಂದಿ ವರ್ಗ,ಗೃಹರಕ್ಷಕರು ಮತ್ತಿತರರು ಇದ್ದರು.

Share and Enjoy !

Shares