ವಿಜಯನಗರವಾಣಿಸುದ್ದಿ
ಬಳ್ಳಾರಿಜಿಲ್ಲೆ
ಕಂಪ್ಲಿ :ಪಟ್ಟಣದಲ್ಲಿ ಅಂಬೇಡ್ಕರ್ ಅವರ 64ನೇ ಪರಿ ನಿರ್ವಾಣ ದಿನಾಚರಣೆ ಭಾನುವಾರ ಅಚರಿಸಲಾಯಿತು.
ಇಲ್ಲಿನ ಸಂತೆ ಮಾರುಕಟ್ಟೆ ಬಳಿಯಲ್ಲಿ ಅಂಬೇಡ್ಕರ್ ಭಾವಚಿತ್ರದ ಮುಂದೆ ಕ್ಯಾಂಡಲ್ ಹಚ್ಚುವ ಮೂಲಕ ಪರಿ ನಿರ್ವಾಣ ದಿನಾಚರಣೆಗೆ ಚಾಲನೆ ನೀಡಲಾಯಿತು.
ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಉಪಾಧ್ಯಕ್ಷ ಪುಟಾಣಿ ಅಂಜಿನಪ್ಪ ಮಾತನಾಡಿ, ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆ ದೇಶದಾದ್ಯಂತ ನಡೆಯುತ್ತಿದೆ. ಶ್ರೇಷ್ಠ ಮಾನವತಾವಾದಿಯಾಗಿ ದೇಶಕ್ಕೆ ಸರ್ವಸಮ್ಮತವಾಗುವ ಸಂವಿಧಾನ ಕೊಟ್ಟಿದ್ದಾರೆ. ಉತ್ತಮ ಸಂವಿಧಾನದ ಕಾರಣಕ್ಕೆ ಎಸ್ಸಿ, ಎಸ್ಟಿ, ಒಬಿಸಿ ಜನರು, ಕಾರ್ಮಿಕರು, ಮಹಿಳೆಯರು, ಧಾರ್ಮಿಕ ಅಲ್ಪ ಸಂಖ್ಯಾಂತರು ಸಮಾನತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವಕಾಲಿಕ ಜೀವಂತ, ಹೀಗಾಗಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಅನುಸರಿಸಿ, ಅಭಿವೃದ್ಧಿಯತ್ತ ಸಾಗುವ ಜತೆಗೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಗೌರವ ಸಲ್ಲಿಸಬೇಕು. ದೇಶದ ಎಸ್ಸಿ, ಎಸ್ಟಿ ಹಾಗೂ ಓಬಿಸಿ ಮತ್ತು ದಲಿತರು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಅಂಬೇಡ್ಕರ್ ಅವರು ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂಬೇಡ್ಕರ್ ಅವರ ವಿಚಾರಧಾರೆಗಳು ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪವಾಗಿವೆ. ಅವರ ಮಾರ್ಗದಲ್ಲಿ ನಡೆದರೆ, ಸುಂದರ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಬಾ ಸಾಹೇಬರ ಪರಿನಿರ್ವಾಣ, ಸಂಕಲ್ಪ ದಿನದ ಅಂಗವಾಗಿ ಕರ್ನಾಟಕ ಬೌದ್ಧ ಸಮಾಜ ಬಳ್ಳಾರಿ ಜಿಲ್ಲಾ ಘಟಕ ಹಾಗು ಅಂಬೇಡ್ಕರ್ ಅನುಯಾಯಿಗಳ ಬಳಗದ ವತಿಯಿಂದ ಮೇಣದ ಬತ್ತಿ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು. ಇಲ್ಲಿನ ಸಂತೆ ಮಾರುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ನಡುವಲ ಮಸೀದಿ, ಡಾ.ರಾಜಕುಮಾರ್ ಮುಖ್ಯ ರಸ್ತೆ ಮುಖಾಂತರ ಸಾಗಿ, ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಸ ಪೂಜೆ ಜತೆಗೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಿ.ಎಸ್.ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ವಕೀಲ ಟಿ.ಶಿವಪ್ಪ, ಸಹ ಕಾರ್ಯದರ್ಶಿ ಸಿ.ಕೆ.ಮಂಜುನಾಥ, ಶಿಕ್ಷಕ ಉಮೇಶ್ ಹಾಗೂ ಅಂಬೇಡ್ಕರ್ ಅನುಯಾಯಿಗಳ ಬಳಗದ ಎಂ.ಸಿ.ಮಾಯಪ್ಪ, ವಕೀಲ ಸಿ.ರುದ್ರಪ್ಪ, ಬಿ.ದೇವೇಂದ್ರ, ಟಿ.ವಿರುಪಣ್ಣ, ಬಂಡಾರಿ ಮಂಜುನಾಥ, ಸಿ.ನಾಗರಾಜ, ಜ್ಞಾನೇಶ್, ಸಿ.ಬಸವರಾಜ, ಸಿ.ನಾಗರಾಜ, ಅಯೋಧ್ಯ ಬಸವರಾಜ, ದಾಸರ ಅಂಜಿನಿ, ಕೃಷ್ಣ,ವಸಂತರಾಜ ಕಹಳೆ, ಪೂಜಾರಿ ರಮೇಶ್, ರಾಜಶೇಖರ್, ನೀಲಕಂಠ, ಪವನ್ ಕುಮಾರ್, ಲಕ್ಷ್ಮಣ, ನಾಗೇಶ್, ನಿಂಗಪ್ಪ, ದರ್ಶನ ಸೇರಿದಂತೆ ಅನೇಕರಿದ್ದರು.