ನಗರದಲ್ಲಿ ಐಎಂಎಯಿಂದ ಆರ್‌ಐಎಂಎಸಿಟಿ ಉನ್ನತೀಕರಣ ಘಟಕ ಉದ್ಘಾಟನೆ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು:ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಅತ್ಯಂತ ಶ್ಲಾಘನೀಯವಾಗಿದ್ದು, ಇದರಿಂದ ಸುರಕ್ಷಿತವಾಗಿ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಿದಂತಾಗಿದೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಹೇಳಿದರು.
ಅವರಿಂದು ನಗರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಹಮ್ಮಿಕೊಂಡಿದ್ದ ಘನತ್ಯಾಜ್ಯ ವಿಲೇವಾರಿ ಘಟಕದ ನೂತನ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಐಎಂಎ ಈ ವಿನೂತನ ಕಾರ್ಯ ಕೈಗೊಂಡಿದ್ದು, ಆಸ್ಪತ್ರೆ, ಕ್ಲೀನಿಕ್, ಮೆಡಿಕಲ್ ಕಾಲೇಜುಗಳಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಪಿ.ಪಿ.ಇ ಕಿಟ್ ಸೇರಿದಂತೆ, ಕೋವಿಡ್-೧೯ ಸೋಂಕು ಹರಡುವ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಘನತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ, ಈವೊಂದು ಉತ್ತಮ ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಂಡಿರುವುದು ಶ್ಲಾಘನೀಯವಾಗಿದೆ. ಐಎಂಎ ಈ ಕಾರ್ಯಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ನಂತರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಎಲ್ಲಾ ಜಿಲ್ಲೆಗಳಲ್ಲಿ ರಿಮ್ಯಾಕ್ಟ್ ಸೌಲಭ್ಯಗಳು ಆರಂಭವಾಗಿದ್ದು, ಎಲ್ಲಾ ಮೆಡಿಕಲ್ ಕಾಲೇಜು, ಕ್ಲೀನಿಕ್‌ಗಳ ಸಹಕಾರದಿಂದ ಐಎಮ್‌ಎ ಈ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಿದ್ದು ಶ್ಲಾಘನೀಯ. ಅದೇ ರೀತಿ ನಗರಸಭೆಯು ರಿಮ್ಯಾಕ್ಟ್ ಮಾದರಿಯಲ್ಲಿ ಕಸವನ್ನು ಸಂಗ್ರಹಿಸಬೇಕು. ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ವಿಲೇವಾರಿಗೆ ಮುಂದಾಗಬೇಕು, ನಗರದಲ್ಲಿ ಈಗಾಗಲೇ ಕಸವನ್ನು ಹೊತ್ತೊಯ್ಯುವ ವಾಹನಗಳಿಂದ ಕಸವನ್ನು ರಸ್ತೆ ಮೇಲೆ ಬಿಸಾಡಿಕೊಂಡು ಹೋಗುತ್ತಾರೆ ಎಂಬ ದೂರುಗಳಿದ್ದು, ಸರಿಯಾದ ಕ್ರಮದಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೌರ ಕಾರ್ಮಿಕರನ್ನು ಗುತ್ತಿಗೆ ಅಥವಾ ಖಾಯಂ ಆಗಿ ಸೇವೆಯಲ್ಲಿ ನೇಮಿಸಿಕೊಂಡು ನಗರದಲ್ಲಿ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ್ ಮಾತನಾಡಿ, ಘನತ್ಯಾಜ್ಯ ವಿಲೇವಾರಿಗೆ ನಗರಸಭೆ ಎಲ್ಲಾ ಸಹಕಾರ ನೀಡುವ ಮೂಲಕ ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಡಾ. ಮಹಾಲಿಂಗಪ್ಪ, ಡಾ.ಶ್ರೀಶೈಲೇಶ್, ಡಾ.ಅನಿಲ ಕುಮಾರ್, ಡಾ.ಶ್ರೀಹಷ್ ಪಾಟೀಲ್ ಮತ್ತು ಐಎಮ್‌ಎ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share and Enjoy !

Shares