ರಾಯಚೂರು,ಜ.15- ಕಾನೂನು ಬಾಹಿರ ವಜಾ ನಿಲ್ಲಿಸಿ ಎಲ್ಲಾ ಕಾರ್ಮಿಕರನ್ನು ಮುಂದುವರೆಸಿ, ವೇತನ ಮತ್ತಿತರ ಶಾಸನಬದ್ಧ ಸೌಲಭ್ಯಗಳನ್ನು ನೀಡದಿರುವ ಕಂಪನಿ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಸ್ಪಾರ್ಕ್ ವೀ ಕೆಮಿಕಲ್ಸ್ ಗುತ್ತಿಗೆ ಕಾರ್ಮಿಕರ ಸಂಘ ಪ್ರತಿಭಟಿಸಿತು.ಇಂದು ನಗರ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಿಲ್ಲಾಡಳಿತಕ್ಕೆ ಮನವಿಬಸಲ್ಲಿಸಿದ ಅವರು, ಚಿಕ್ಕಸೂಗುರು ಕೆಐಎಡಿಬಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಬರುವ ಸ್ಪಾರ್ಕ್ ವೀ ಫೈನ್ ಕೆಮಿಕಲ್ಸ್ ಯಲ್ಲಿ ಪ್ರತಿಭಾ ಎಂಟರ್ ಪ್ರೈಸಸ್ ಅಡಿಯಲ್ಲಿ ಬರುವ 50 ಕ್ಕೂ ಹೆಚ್ಚು ಕಾರ್ಮಿಕರನ್ನು ಜ.5 ರಂದು ಏಕಾಏಕಿ ವಜಾಗೊಳಿಸಿದ್ದು, ಕಾರಣ ಕೇಳಿದರೇ ಕೆಲವೇ ಕಾರ್ಮಿಕರು ಬೇಕು ಉಳಿದವರು ಬೇಡ ಎಂದು ಹೇಳುತ್ತಾರೆ. ಶಿಫ್ಟ್ ಗೆ ಬಂದ ಕಾರ್ಮಿಕರನ್ನು ಕೆಲಸಕ್ಕೆ ಬೇಡ ಎಂದು ಕಂಪನಿಯಿಂದ ಹೊರಗೆ ಕಳುಹಿಸಿದ್ದಾರೆ. ಜೊತೆಗೆ ಈ ಕಾರ್ಮಿಕರ ಜಾಗಕ್ಕೆ ಹೊಸ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಹುನ್ನಾರ ನಡೆದಿದೆ ಇದು ಕಾನೂನು ಬಾಹೀರ ಮತ್ತು ಕಾರ್ಮಿಕರನ್ನು ಬೆದರಿಸುವ ತಂತ್ರವಾಗಿದೆ ಎಂದರು.
ಕಾರ್ಮಿಕರನ್ನು ಬಜಾ ಗೊಳಿಸಿದ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಮಾತನಾಡಲೂ ಹೋದರೇ ಸ್ಪಂಧನೆ ನೀಡುತ್ತಲ್ಲಾ ಹಾಗೂ ಕರೆಗೂ ಉತ್ತರಿಸುತ್ತಿಲ್ಲಾ. ಆಡಳಿತ ವರ್ಗವೂ ಶಾಸನಬದ್ಧ ಸೌಲಭ್ಯಗಳಾದ ವೇತನ, ಪಿಎಫ್, ಇಎಸ್ಐ ಹಾಗೂ ರಜೆ ಇನ್ನಿತರ ಸೌಲಭ್ಯಗಳನ್ನು ನೀಡಲು ನೀರಾಕರಿಸುತ್ತಿರುವುದು ಹಾಗೂ ಕಾರ್ಮಿಕರಿಗೆ ನೋಟೀಸ್ ನೀಡದೇ ಕೆಲಸದಿಂದ ವಜಾ ಗೊಳಿಸುತ್ತಿರುವುದು ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಕೆಳಗೆ ಸ್ಪಷ್ಟವಾಗಿ ನಮೋದಿಸಿರುವ ಒತ್ತಾಯಗಳನ್ನು ಈಡೇರಿಸುವಂತೆ ಹಾಗೂ ಕಂಪನಿಯಿಂದ ಏಕಾಏಕಿ ವಜಾಗೊಳಿಸಿರುವ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಯತಾವತ್ತಾಗಿ ಮುಂದುವರೆಸುವಂತೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿರೇಶ ಎನ್.ಎಸ್, ಗೌರವಾಧ್ಯಕ್ಷ ಯಲ್ಲಪ್ಪ ನಾಮಾಲಿ, ಉಪಾಧ್ಯಕ್ಷ ಮಹೇಶ.ಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ಉದಯಕುಮಾರ್, ಬಡೇಸಾಬ್, ಸುರೇಶ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.