ಕೊಪ್ಪಳ ಜಿಲ್ಲೆ
ಗಂಗಾವತಿ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ರಾಮಮಂದಿರ ನಿಧಿ ಸಮರ್ಪಣ ಅಭಿಯಾನವನ್ನು ಗಂಗಾವತಿ ನಗರದಲ್ಲಿ ಹೆಬ್ಬಾಳ ಬೃಹನ್ಮಠ ನಾಗಭೂಷಣ ಸ್ವಾಮಿಗಳು ಉದ್ಘಾಟಿಸಿದರು.
ಶುಕ್ರವಾರ ನಗರದ ಆನೆಗೊಂದಿ ರಸ್ತೆಯ ಸಂಘದ ಕಾರ್ಯಾಲಯದ ಆವರಣದಲ್ಲಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಅಡಿಯಲ್ಲಿ ಆಯೋಜಿಸಿದ್ದ ಅಭಿಯಾನದ ಕಾರ್ಯಾಲಯವನ್ನು ಪ್ರಾರಂಭದಲ್ಲಿ ಉದ್ಘಾಟಿಸಿ ನಂತರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀರಾಮ ಮಂದಿರ ನಿರ್ಮಾಣ ಈ ದೇಶದ ಪ್ರತಿಯೊಬ್ಬ ಪ್ರಜೆಯ ಸಂಕಲ್ಪವಾಗಿದೆ. ಹೀಗಾಗಿ ದೇಶದ ಪ್ರತಿಯೊಂದು ನಗರ, ಗ್ರಾಮಗಳಲ್ಲಿ ಮಂದಿರ ನಿರ್ಮಾಣಕ್ಕೆ ಜನರು ಸ್ವಯಂಪ್ರೇರಣೆಯಿAದ ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ. ಶ್ರೀರಾಮಮಂದಿರ ನಿರ್ಮಾಣ ಈ ದೇಶದ ಐಕ್ಯತೆಯ ಸಂಕೇತವಾಗಿದೆ. ಸಾಮಾನ್ಯ ಕುಟುಂಬದ ಚಿಕ್ಕ ಮಕ್ಕಳು ಕೂಡಾ ಮಂದಿರ ನಿರ್ಮಾಣಕ್ಕೆ ನಾಲ್ಕಾರು ವರ್ಷಗಳಿಂದ ತಮ್ಮ ಕೈಗೆ ಬಂದಿರುವ ಸ್ವಲ್ಪ ಹಣವನ್ನು ದಿನ ನಿತ್ಯ ಕೂಡಿಟ್ಟು ಇಲ್ಲಿ ಸಮರ್ಪಿಸಿರುವುದು ಅವರ ಭಕ್ತಿ ಭಾವವನ್ನು ಎತ್ತಿ ತೋರಿಸಿದೆ. ಮಂದಿರ ನಿರ್ಮಾಣಕ್ಕೆ ಸರ್ವರು ಕೈ ಜೋಡಿಸಬೇಕು. ಶ್ರದ್ಧೆಯಿಂದ ಸಮರ್ಪಣಾ ಭಾವನೆಯಿಂದ ನಿಧಿ ಸಲ್ಲಿಸಬೇಕು ಎಂದು ಕರೆ ನೀಡಿದರು. ನಂತರ ಸ್ವಾಮಿಜೀಗಳು ಸಹ ನಿಧಿ ಸಮರ್ಪಿಸಿ ಮಂದಿರ ತೀರ್ಥ ಕ್ಷೇತ್ರದ ಕೂಪನ್ ಪಡೆದುಕೊಂಡರು.
ಆರ್‌ಎಸ್‌ಎಸ್ ಬಳ್ಳಾರಿ ಸಹ ವಿಭಾಗ ಪ್ರಚಾರಕ ಸೋಮಶೇಖರಜೀ ಮಾತನಾಡಿ, ರಾಮಮಂದಿರ ನಿರ್ಮಾಣ ರಾಷ್ಟçಮಂದಿರದ ಸಂಕೇತವಾಗಿದೆ. ಶ್ರೀರಾಮನ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಶ್ರೀರಾಮ ಒಬ್ಬ ಪುರಷೋತ್ತಮ, ಜನನೀ ಮತ್ತು ಜನ್ಮಭೂಮಿಗೆ ಯಾವುದು ಸಮವಲ್ಲ. ಎಲ್ಲಾ ಐಶ್ವರ್ಯ ಇದ್ದರೂ ಲಂಕೆಯಲ್ಲಿ ಉಳಿಯಲು ಮನಸ್ಸು ಮಾಡದ ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲಾದಂತವು ಎಂದು ದೇಶದ ಬಗ್ಗೆ ಇರುವ ಭಕ್ತಿಯನ್ನು ಎತ್ತಿ ತೋರಿಸಿದ್ದಾನೆ. ಹೀಗಾಗಿ ಮಾತೃಭೂಮಿ ಎಂಬ ಕಲ್ಪನೆ ರಾಮನ ಕಾಲದಿಂದಲೂ ಇದೆ. ಹೀಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಅದು ರಾಷ್ಟç ಮಂದಿರವಾಗುತ್ತದೆ. ೪೯೨ ವರ್ಷಗಳ ಹಿಂದೆಯೇ ಈ ದೇಶದಲ್ಲಿ ಮಂದಿರ ಮತ್ತೆ ತಲೆ ಎತ್ತಬೇಕೆಂಬ ಸಂಕಲ್ಪ ಅಂದಿನ ಹಿರಿಯರು ಮಾಡಿದ್ದರು. ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಆಂದೋಲನಗಳು, ಹೋರಾಟಗಳು ನಡೆದಿದೆ. ಇದರಲ್ಲಿ ೪ ಲಕ್ಷಕ್ಕೂ ಅಧಿಕ ರಾಮಭಕ್ತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲರ ಸಂಕಲ್ಪ ಇಂದು ಈಡೇರಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸರಕಾರದಿಂದ ನಿರ್ಮಿಸುವುದಲ್ಲ. ದೇಶದ ಪ್ರತಿಯೊಬ್ಬರು ನೀಡುವ ದೇಣಿಗೆಯಿಂದ ಮಂದಿರ ನಿರ್ಮಾಣವಾಗಬೇಕೆಂಬ ಸಂಕಲ್ಪದೊಂದಿಗೆ ಇಂದು ಅಭಿಯಾನ ಪ್ರಾರಂಭವಾಗಿದೆ. ಈ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಭಿಯಾನದ ನಗರ ಪ್ರಮುಖ ರವೀಂದ್ರ ಹೂಲಗೇರಿ, ಸಂಘ ಚಾಲಕ ದುರ್ಗಾದಾಸ್ ಭಂಡಾರಕರ್ ಇದ್ದರು. ವಿಭಾಗ ಸಂಯೋಜಕ ಅಯ್ಯನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನ ಸಹ ಪ್ರಮುಖ ಚಂದ್ರು ಹಿರೇಮಠ ನಿರ್ವಹಿಸಿದರು. ವಿರೇಶ ಬಲಕುಂದಿ ಸ್ವಾಗತಿಸಿದರು. ಚೆನ್ನು ಹೂಗಾರ ವಂದಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು, ನಗರಸಭೆ ಸದಸ್ಯರು, ಮಹಿಳೆಯರು ಮತ್ತಿತರು ಇದ್ದರು.