ಸಫಾಯಿ ಕರ್ಮಚಾರಿ ಜನಾಂಗದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ಅಮಾನತಿಗೆ ಒತ್ತಾಯ.

Share and Enjoy !

Shares

ರಾಯಚೂರು: ಸಫಾಯಿ ಕರ್ಮಚಾರಿ ಹೆಸರಿನಲ್ಲಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿರುವ ಯೋಜನಾ ನಿರ್ದೇಶಕರನ್ನು ಅಮಾನತ್ತುಗೊಳಿಸಿ ನಿಜವಾದ ಕರ್ಮಚಾರಿಗಳಿಗೆ ಗುರುತಿನ ಚೀಟಿಯನ್ನು ನೀಡಬೇಕೆಂದು ರಾಷ್ಟ್ರೀಯ ಸಫಾಯಿ ಮಜ್ದೂರ್ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಭಾಸ್ಕರ್‌ಬಾಬು ಆಗ್ರಹಿಸಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಹಾಗೂ ರಾಜಕೀಯವಾಗಿ ನಿರ್ಲಕ್ಷ್ಯಕ್ಕೊಳಗಾಗಿರುವ ಕರ್ಮಚಾರಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಮಾನವನ ಮಲಮೂತ್ರಗಳನ್ನು ಎತ್ತಿ ಸ್ವಚ್ಛ ಮಾಡುವ ಕಾಯಕವನ್ನು ಕಂಡು ಈ ಜನಾಂಗದವರು ಸಮಾಜದಲ್ಲಿ ಗೌರವಯುತವಾಗಿ ಮತ್ತು ಆರೋಗ್ಯವಂತರಾಗಿ ಬದುಕಲು ಪ್ರತ್ಯೇಕ ಆಯೋಗ ರಚಿಸಲ್ಪಟ್ಟಿದೆ. ಭಂಗಿಗಳಿಗಾಗಿ ಸ್ಥಾಪಿಸಲ್ಪಟ್ಟ ಆಯೋಗದಲ್ಲಿ ಸಂಬಂಧವೇ ಇರಲಾರದ ವ್ಯಕ್ತಿಗಳನ್ನು ನೇಮಕ ಮಾಡಿ ಕಾಲಹರಣ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ಮಚಾರಿಗಳಿಗೆ ರಕ್ಷಣೆ ನೀಡಬೇಕಾದ ಮತ್ತು ಅವರ ಬದುಕಿನ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿರುವ ಇಲಾಖೆಯು ನಿಜವಾದ ಕರ್ಮಚಾರಿ ಅವರನ್ನು ನಿರ್ಲಕ್ಷ ಮಾಡುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಅನುಸಾರ ನಿಜವಾದ ಕರ್ಮಚಾರಿಗಳಿಗೆ ನ್ಯಾಯ ದೊರೆತಿದೆಯೇ ವಿನಃ ಸಫಾಯಿ ಕರ್ಮಚಾರಿ ಆಯೋಗದಿಂದಲ್ಲ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಆಯೋಗಗಳಲ್ಲಿ ಕರ್ಮಚಾರಿ ಜನಾಂಗದವರನ್ನು ನೇಮಿಸದೇ ಸ್ವಾರ್ಥ ರಾಜಕೀಯ ಮಾಡಲಾಗುತ್ತಿದೆ. ಸಂವಿಧಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಯ ಅಸ್ಪೃಶ್ಯತೆಯಲ್ಲಿಯೇ ಮಹಾ ಅಸ್ಪೃಶ್ಯರಂತೆ ಬದುಕುವ ಈ ಕರ್ಮಚಾರಿ ಬಗ್ಗೆ ಯೋಚಿಸುವವರು ಇಲ್ಲದಂತಾಗಿದೆ. ಈ ಕುರಿತು ಜಿಲ್ಲಾ ಯೋಜನಾಧಿಕಾರಿಗಳಲ್ಲಿ ಸಾಕಷ್ಟು ಬಾರಿ ವಿನಂತಿ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಕರ್ಮಚಾರಿಗಳ ಆರೋಗ್ಯದ ಚಿಕಿತ್ಸೆ ಕೈಗೊಳ್ಳಬೇಕಾಗಿದ್ದ ಇಲಾಖೆಯು ಬೇಕಾಬಿಟ್ಟಿ ಶಿಬಿರಗಳನ್ನು ಆಯೋಜಿಸಿ ಅವರ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಸಮೀಕ್ಷೆ ರೂಪದಲ್ಲಿ ಕಾಲಹರಣ ಮಾಡದೇ ತಕ್ಷಣ ಗುರುತಿನ ಚೀಟಿಯನ್ನು ನೀಡಬೇಕು, ಮ್ಯಾನುವಲ್ ಸ್ಕ್ಯಾವೆಂಜರ್‌ಗಳು ವಾಸ ಮಾಡುವ ಏರಿಯಾಗಳಲ್ಲಿ ಹಕ್ಕುಪತ್ರ ನೀಡಬೇಕು. ವಸತಿ ಹೀನರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು, ಸಫಾಯಿ ಕರ್ಮಚಾರಿಗಳ ರುದ್ರಭೂಮಿಯನ್ನು ಅತಿಕ್ರಮಣ ಮಾಡಿಕೊಂಡವರಿಂದ ಬಿಡಿಸಿ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೀತಾಸಿಂಗ್, ಶ್ರೀಕಾಂತ,ಕೆ. ಗೋಪಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .

Share and Enjoy !

Shares