ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುಂತೆ ಒತ್ತಾಯಿಸಿ ಇಂದು ನಗರದ ಅಸ್ಕಿಹಾಳದಲ್ಲಿ ರಸ್ತೆ ತಡೆ

Share and Enjoy !

Shares
Listen to this article

ರಾಯಚೂರು,ಫೆ.೬- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುಂತೆ ಒತ್ತಾಯಿಸಿ ಇಂದು ನಗರದ ಅಸ್ಕಿಹಾಳದಲ್ಲಿ ರಸ್ತೆ ತಡೆ ಮಾಡುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂಯುಕ್ತ ಹೋರಾಟ ಸಮಿತಿ ಮತ್ತು ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮುಖ್ಯ ರಸ್ತೆಯ ಸಂಚಾರವನ್ನು ತಡೆಗಟ್ಟಿದ್ದರಿಂದ ಕೆಲಕಾಸ ಸಂಚಾರ ಅಸ್ತವ್ಯಸ್ತ ಉಂಟಾಯಿತು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು, ಎಪಿಎಂಸಿ ಕಾಯ್ದೆ ಸೇರಿ ಜನ ವಿರೋಧಿ ನೀತಿಗಳನ್ನು ಈ ಕೂಡಲೇ ಹಿಂಪಡೆಯಲೇ ಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಕೇಂದ್ರ ಸರ್ಕಾರ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಈ ನೀತಿಗಳಿಂದ ಕೃಷಿ ಕ್ಷೇತ್ರ ರಕ್ಷಣೆಯಾಗುವುದಿಲ್ಲ ಎಂದು ರೈತರಿಗೆ ಈಗಾಗಲೇ ಮನವರಿಕೆಯಾಗಿದೆ. ರೈತರಲ್ಲಿಯೂ ಹಲವು ಜನ ಮೇಧಾವಿ, ಆರ್ಥಿಕ ತಜ್ಞರಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಸಹ ಹಲವು ಆರ್ಥಿಕ ತಜ್ಞರು ಭಾಗವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಅವರು ರಸ್ತೆ ತಡೆಯಲ್ಲಿ ಭಾಗವಹಿಸಿ ಹೇಳಿದರು.ಈ ಕಾನೂನುಗಳಿಂದ ಕೃಷಿ ಭೂಮಿ ಮತ್ತು ಕೃಷಿ ಮಾರುಕಟ್ಟೆ ಉಳಿಯುವುದಿಲ್ಲ. ಎಲ್ಲಾ ಕೃಷಿ ಕ್ಷೇತ್ರ ಮತ್ತು ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒತ್ತೆಯಿಡಲು ಪ್ರಧಾನ ಮಂತ್ರಿಯವರು ಸಜ್ಜಾಗಿದ್ದಾರೆ ಎಂದು ಟೀಕಿಸಿದರು.ಚುನಾವಣೆ ಸಂದರ್ಭದಲ್ಲಿ ಹೇರಳವಾಗಿ ಚುನಾವಣಾ ಫಂಡ್ ನೀಡಿದ ಕಾರ್ಪೊರೇಟ್ ಕಂಪನಿಗಳ ಋಣ ತೀರಿಸಲು ಇಂದು ಕಾರ್ಪೊರೇಟ್ ಸ್ನೇಹಿ ಕಾಯ್ದೆಗಳನ್ನು ರೂಪಿಸುವುದರ ಮೂಲಕ ಕೃಷಿ ಕ್ರೇತ್ರವನ್ನೆ ನಾಶಮಾಡಲು ಹೊರಟಿದ್ದಾರೆ ಎಂದರು.ಸೌರವ ಗಂಗೂಲಿ ಅವರ ಆರೋಗ್ಯದ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಸಿದ ಮೋದಿ ಅವರು, ದೆಹಲಿಯ ವಿವಿಧ ಗಡಿಗಳಲ್ಲಿ ಸತತ ಎರಡು ತಿಂಗಳಿನಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವ ರೈತರ ಕುರಿತು ಮತ್ತು ಹೋರಾಟದ ಸಮಯದಲ್ಲಿ ಮೃತರಾದ ಸುಮಾರು ೧೫೦ ಜನ ರೈತರು ಮೃತರಾದರೂ ಒಂದೂ ಸಾಂತ್ವಾನದ ಮಾತನಾಡದ ಪ್ರಧಾನಿ ಮೋದಿಯವರ ಹೃದಯ ಕಲ್ಲು ಹೃದಯವಾಗಿದೆ ಎಂದರು.ಹೋರಾಟ ನಿರತ ರೈತರೆಲ್ಲರೂ ರೈತರಲ್ಲ, ಅವರೆಲ್ಲ ದೊಡ್ಡ ದೊಡ್ಡ‌ ಶ್ರೀಮಂತರು, ವಿರೋಧ ಪಕ್ಷದ ಕುಮ್ಮಕ್ಕಿನಿಂದ ಹೋರಾಟ ಮಾಡಲಾಗುತ್ತಿದ್ದಾರೆ. ಬೇರೆಯವರು ಇವರಿಗೆ ಹಣ ನೀಡುತ್ತಿದ್ದಾರೆ, ಖಲೀಸ್ಥಾನಿವಾದಿಗಳು ಸೇರಿದಂತೆ ಅನೇಕ ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಆದರೆ ಇದ್ಯಾವೂದಕ್ಕೂ ರೈತರು ಜಗ್ಗುವುದಿಲ್ಲ. ದೆಹಲಿಯ ಗಡಿಯಲ್ಲಿ ಹೋರಾಟ ಮಾಡುತ್ತಿರುವವರು ನಿಜವಾದ ರೈತರು ಎಂದು ಹೇಳಿದರು.ಪ್ರತಿಭಟನೆ ವೇಳೆಯಲ್ಲಿ ಯಾವುದೇ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವಾರು ಪೊಲೀಸ್ ಸಿಬ್ಬಂದಿಯೊಂದಿಗೆ ಸೂಕ್ತ‌ಭದ್ರತೆ ಕಲ್ಪಿಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವನಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಜಿ.ವಿರೇಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಶರಣಬಸವ, ರೂಪ ಶ್ರೀನಿವಾಸ ನಾಯಕ, ಅಮರಣ್ಣ ಗುಡಿಹಾಳ, ಮಾರೆಪ್ಪ ಅರವಿ, ರಾಂಬಾಬು, ಸೂಗೂರಯ್ಯ ಆರ್.ಎಸ್.ಮಠ, ವಿ.ಭೀಮೇಶ್ವರ ರಾವ್, ದೊಡ್ಡ ಬಸವನಗೌಡ ಬಲ್ಲಟಗಿ, ಜಿಂದಪ್ಪ ವಡ್ಲೂರು, ಮಲ್ಲಣ್ಣ ದಿಮ್ಮಿ, ಯಂಕಪ್ಪ ಕಾರುಬಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares