ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನ ವಿರೋಧಿ ರೈತ ಮತ್ತು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ.

ವಿಜಯನಗರವಾಣಿ ಸುದ್ದಿ

ಹೊಸಪೇಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನ ವಿರೋಧಿ ರೈತ ಮತ್ತು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆಗಳು ಪ್ರತಭಟನೆ ನಡೆಸಿದವು.
ಶನಿವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಡಣಾಪುರದ ಬಳಿ ಪ್ರತಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆಗಳ ಜಿಲ್ಲಾಧ್ಯಕ್ಷ ಗೋಣಿಬಸಪ್ಪ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಕೇಂದ್ರ ಸರಕಾರ ದಮನ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ, ಇದು ಸಂವಿಧಾನಕ್ಕೆ ಮಾಡಿದ ಅಪಮಾನ, ಈಗಾಗಲೇ ಇಡಿ ದೇಶದ್ಯಾಂತ ರೈತರು ಕೊರೋನಾದಿಂದ ಸಂಕಷ್ಟದಲ್ಲಿ ಮುಳುಗಿದ್ದಾರೆ ಇಂತಹ ಸಂದರ್ಭದಲ್ಲಿ ವಿದ್ಯುತ್, ಕೃಷಿ ಮತ್ತು ಕಾರ್ಮಿಕ ಕಾಯ್ದೆಗಳನ್ನ ತರುವ ಅಗತ್ಯತೆ ಇದೆಯಾ ಎಂದರು. ನರೇಂದ್ರ ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ದೇಶವನ್ನು ಒತ್ತೆ ಇಡುವ ಕಾರಣಕ್ಕಾಗಿ ಈ ರೀತಿಯ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ಕೋಟ್ಯಂತರ ರೈತರ ಹೊಟ್ಟೆಗೆ ಬರೆ ಹಾಕಲು ಹೊರಟಿದೆ. ಪ್ರತಿಭಟನಾಕಾರರು ಆಹಾರ ಭದ್ರತೆ ಹಾಗೂ ಜೀವನಾವಶ್ಯಕ ವಸ್ತುಗಳಾದ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆಯ ವಿರುದ್ಧ, ಜೊತೆಗೆ ವಿದ್ಯುತ್ ಕ್ಷೇತ್ರ, ಆರ್ಥಿಕ ವಲಯ, ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣದ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಪಟ್ಟಣದ ಉಪತಹಶಿಲ್ದಾರೆ ಲಾವಣ್ಯರ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದರು. ಬಂದ್ ವೇಳೆ ಪ್ರತಿಭಟನಾಕಾರರು ರಸ್ತೆ ತಡೆದು ರಾ.ಹೆ.50ನ್ನು ಬಂದ್ ಮಾಡಿದ ಕಾರಣಕ್ಕಾಗಿ ರಸ್ತೆಯ ಎರಡು ಬದಿಯಲ್ಲಿ ಕಿಲೋಮಿಟರ್‌ಗಟ್ಟಲೆ ವಾಹನ ಜಮಾವಣೆಯಾಗಿದ್ದವು.
ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಡೂರು ಸಿ.ಪಿ.ಐ.ಉಮೇಶ್, ಪಟ್ಟಣದ ಪಿ.ಎಸ್.ಐ. ಎಂ.ಶಿವಕುಮಾರ ನೇತೃತ್ವದಲ್ಲಿ ಸೂಕ್ತ ಬಿಗಿ ಬಂದೊಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಕುರಿ ಶಿವಮೂರ್ತಿ, ಕರ್ನಾಟಕ ರೈತಸಂಘ (ಹುಚ್ಚವನಹಳ್ಳಿ ಮಂಜುನಾಥ)ದ ಕಲ್ಲಾಳ ಪರಶುರಾಮ, ಕೆ.ಕೃಷ್ಣ, ಸಿ.ಐ.ಟಿ.ಯು.ಸಿ.ಯ ಜಗನ್ನಾಥ, ಎಂ.ಬಸವರಾಜ, ಎಂ.ಎಲ್.ಕೆ.ನಾಯ್ಡು, ಜನವಾದಿ ಮಹಿಳಾ ಸಂಘಟನೆಯ ಮಾಳಮ್ಮ, ಕೆ.ಆರ್.ಎಸ್.ಪಕ್ಷದ ಪ.ಯ.ಗಣೇಶ, ರಂಗಪ್ಪದಾಸರ, ಕುಮಾರಸ್ವಾಮಿ, ವಿ.ಗಾಳೆಪ್ಪ, ರತ್ನಮ್ಮ, ಸಿದ್ದನಗೌಡ, ಹನುಮಂತಪ್ಪ, ಸರೋಜಮ್ಮ, ಮಹೇಶಪ್ಪ, ಶೇಖಪ್ಪ, ಇತರರಿದ್ದರು.

Share and Enjoy !

Shares