ಹಿಮಪಾತ ಸಂಭವಿಸಿದ ಪರಿಣಾಮ, ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ.

Share and Enjoy !

Shares
Listen to this article

ಉತ್ತರಾಖಂಡ ಫೆ 07: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ದುರಂತವೊಂದು ನಡೆದು ಹೋಗಿದೆ. ಹಿಮಪಾತ ಸಂಭವಿಸಿದ ಪರಿಣಾಮ, ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಧೌಲಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ನದಿ ತಟದ ರೌನಿ ಎಂಬ ಗ್ರಾಮಕ್ಕೆ ನೀರು ನುಗ್ಗಿದೆ. ಅಷ್ಟೇ ಅಲ್ಲ, ಜಲವಿದ್ಯುತ್ ಸ್ಥಾವರ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲೂ ಭಾರೀ ನಷ್ಟ ಉಂಟಾಗಿದೆ.

ಈವರೆಗಿನ ಅಂದಾಜಿನ ಪ್ರಕಾರ 100 ರಿಂದ 150 ಮಂದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಅವರು ಎಎನ್‌ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ಧಾರೆ.

ರಿಷಿ ಗಂಗಾ ಜಲವಿದ್ಯುತ್ ಯೋಜನೆಗೆ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮವಾಗಿ, ಇಲ್ಲಿದ ಜನರು ಹಾಗೂ ಕಾಮಗಾರಿಗೆ ಬಳಸುತ್ತಿದ್ದ ಉಪಕರಣ, ವಾಹನ ಸೇರಿದಂತೆ ಸಮಸ್ತವೂ ಕೊಚ್ಚಿ ಹೋಗಿದೆ. ಇದೇ ವೇಳೆ ಸಮೀಪದ ಅಲಕಾನಂದ ನದಿಯಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ಚಮೋಲಿ ಜಿಲ್ಲಾಡಳಿತ ಹಾಗೂ ಪೊಲೀಸರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಅಲಕಾನಂದ ಹಾಗೂ ಸುತ್ತಮುತ್ತಲ ಪ್ರದೇಶದ ಜನರನ್ನು ತುರ್ತಾಗಿ ಸ್ಥಳಾಂತರಿಸಲಾಗುತ್ತಿದೆ. ಈ ನಡುವೆ, ಸಮೀಪದ ಭಗೀರಥಿ ನದಿಯ ಪ್ರವಾಹ ಸ್ವಲ್ಪ ಕಡಿಮೆಯಾಗಿದೆಯಾದರೂ, ಅಲಕಾನಂದ, ಶ್ರೀನಗರ ಡ್ಯಾಂ ಹಾಗೂ ರಿಷಿಕೇಷ ಡ್ಯಾಂಗಳ ನೀರನ್ನು ಆದಷ್ಟು ಬೇಗ ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಒಂದು ವೇಳೆ ಅಪಾರ ಪ್ರಮಾಣದ ನೀರು ಹರಿದುಬಂದರೆ ಜಲಾಶಯಕ್ಕೆ ಅಪಾಯವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ.ಉತ್ತರಾಖಂಡ್ ಹಿಮಪರ್ವತ ಸ್ಫೋಟ ಮತ್ತು ಜಲಪ್ರಳಯದಲ್ಲಿ ಮೃತಪಟ್ಟವರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ.

Share and Enjoy !

Shares