ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ವೇಲ್‍ನಿಂದ ಕುತ್ತಿಗೆಯನ್ನು ಬಿಗಿದು ತನ್ನ ಪತ್ನಿಯನ್ನೇ ಕೊಲೆಗೈದ ಪ್ರಕರಣವೊಂದು ಪಟ್ಟಣದ ರಾಮನಗರದ ಏರಿಯಾದಲ್ಲಿ ಗುರುವಾರ ಸಂಜೆ ನಡೆದಿದೆ.ಹಡಗಲಿಯ ಎಚ್.ಮನ್ಸೂರಾ (27) ಕೊಲೆಯಾದ ದುರ್ದೈವಿ, ತನ್ನ ಪತಿ ತಾಲೂಕಿನ ಬಲ್ಲಾಹುಣ್ಸೆ ಗ್ರಾಮದ ಶಫೀವುಲ್ಲಾನ ಜೊತೆ ವಿವಾಹವಾಗಿ 8 ತಿಂಗಳು ಕಳೆದಿದೆ. ಮದುವೆ ಆರಂಭದಿಂದಲೂ ಇಬ್ಬರ ನಡುವೆ ದಾಂಪತ್ಯ ಕಲಹವಿತ್ತು. ಆದರೆ ಎರಡು ಕಡೆ ಕುಟುಂಬದವರು ಹೊಂದಿಕೊಂಡು ಜೀವನ ನಡೆಸುವಂತೆ ತಿಳಿಸಿದ್ದರು. ಹಡಗಲಿ ಜಿಪಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಆಗಿ ಮನ್ಸೂರಾ ಕೆಲಸ ಮಾಡುತ್ತಿದ್ದಳು. ಶಫೀವುಲ್ಲಾ ಗುತ್ತಿಗೆದಾರನಾಗಿದ್ದ. ಮೊದಲಿನಿಂದಲೂ ಕಚೇರಿ ಕೆಲಸಕ್ಕೆ ಹೋದಾಗ ಇವರಿಬ್ಬರ ನಡುವೆ ಪ್ರೀತಿ ಬೆಳೆದು ಮನೆಗಳಲ್ಲಿ ಒಪ್ಪಿಸಿ ಮದುವೆಯಾಗಿದ್ದರು. ಶಫೀವುಲ್ಲಾ ಮದುವೆಯಲ್ಲಿ ಹುಡುಗಿ ಕುಟುಂಬದಿಂದ ವರದಕ್ಷಣಿ ರೂಪದಲ್ಲಿ ಹಣ ಮತ್ತು ಬಂಗಾರ ನೀಡಿದ್ದಾರೆ. ಆದರೂ ದುರಾಸೆಗೆ ಬಿದ್ದ ಶಫೀವುಲ್ಲಾ ಕೆಲಸ ಮಾಡುತ್ತಿದ್ದ ಹೆಂಡತಿಯನ್ನು ಆಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ದಾಂಪತ್ಯ ಕಲಹದಿಂದಾಗಿ ಕೆಲ ತಿಂಗಳು ಮನ್ಸೂರಾ ಹಡಗಲಿಯಲ್ಲಿಯೇ ಇದ್ದಳು. ಎರಡು ದಿನಗಳ ಹಿಂದೆ ಶಫೀವುಲ್ಲಾ ಪತ್ನಿಯನ್ನು ಮನವೊಲಿಸಿ ಹಬೊಹಳ್ಳಿಯಲ್ಲಿ ಬಾಡಿಗೆ ಮನೆಯೊಂದು ಮಾಡಿದ್ದೇನೆ. ಇನ್ಮುಂದೆ ಅಲ್ಲೇ ಇರೋಣವೆಂದು ಕರೆದುಕೊಂಡು ಬಂದು ಕುತ್ತಿಗೆಗೆ ವೇಲ್ ಸುತ್ತಿ ಬಿಗಿದು ಕೊಲೆಗೈದಿದ್ದಾನೆ. ಆದರೆ ಮೃತದೇಹ ಬೆತ್ತಲಾಗಿದ್ದು, ಮುಖ, ಎದೆ ಹಾಗೂ ಗುಪ್ತಾಂಗಗಳ ಮೇಲೆ ಗಾಯಗಳಾಗಿವೆ. ಮೇಲ್ನೋಟಕ್ಕೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ತಾನೇ ಪೊಲೀಸ್ ಠಾಣೆಗೆ ತೆರಳಿ ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಪೊಲೀಸರು ಸ್ಥಳ ಪರಿಶೀಲಿಸಿದಾಗ ತಾನೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ಹಿಂಸೆಯನ್ನು ನೀಡಿ ಕೊಲೆ ಮಾಡಿದ್ದಾನೆಂದು ಮನ್ಸೂರಾಳ ತಾಯಿ ಎಚ್.ನೂರ್ ಆಸ್ಮಾ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಪಿಎಸ್‍ಐ ವೈಶಾಲಿ ಝಳಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್, ತಹಸೀಲ್ದಾರ ಕೆ.ಶರಣಮ್ಮ, ಡಿವೈಎಸ್ಪಿ ರಘುಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.