ರಾಯಚೂರು.ಫೆ.೧೭- ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಒಳ ಪಂಗಡಗಳನ್ನು ವೃತ್ತಿ ಪರವಾಗಿ ವಿಂಗಡಿಸಿ, ಪ್ರವರ್ಗ-೧ ಮತ್ತು ಪ್ರವರ್ಗ-೨ ಎ ರ ಮೀಸಲಾತಿ ಸೌಲಭ್ಯ ಒದಗಿಸಿ, ೨೦೦೮ ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಆದೇಶ ನಿಯಮ ಬಾಹೀರವಾಗಿದ್ದು, ೧೫ ದಿನದೊಳಗೆ ಭಾರತ ಸಂವಿಧಾನದ ವಿರುದ್ಧ ಜಾರಿಗೊಂಡ ಈ ಆದೇಶವನ್ನು ರದ್ದು ಮಾಡದಿದ್ದರೇ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುವುದಾಗಿ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರಾ ಅವರು ಎಚ್ಚರಿಸಿದ್ದಾರೆ.ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ೧೯೭೭ ರಲ್ಲಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗಳಾಗಿ ಒಟ್ಟು ಶೇ.೫೮ ರಷ್ಟು ಮೀಸಲಾತಿ ಒದಗಿಸಲಾಗಿತ್ತು. ಹಿಂದುಳಿದ ಸಮುದಾಯಿಗಳಿಗಾಗಿ ಶೇ.೨೦, ಹಿಂದುಳಿದ ಜಾತಿಗಳಿಗೆ ಶೇ. ೧೦, ಹಿಂದುಳಿದ ಬುಡಕಟ್ಟುಗಳಿಗೆ ಶೇ.೫, ಪರಿಶಿಷ್ಟ ಜಾತಿಗಳಿಗೆ ಶೇ.೧೫ ಮತ್ತು ಪರಿಶಿಷ್ಟ ಪಂಗಡ ಶೇ. ೩ ರಷ್ಟು ಮೀಸಲಾತಿ ಒದಗಿಸಲಾಗಿತ್ತು. ಇದು ೧೯೯೨ ರ ವರೆಗೂ ಜಾರಿಯಲ್ಲಿತ್ತು. ಮೀಸಲಾತಿ ಸೌಲಭ್ಯ ಶೇ.೫೦ ರ ಪ್ರಮಾಣ ಮೀರಬಾರದೆಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪುವೊಂದರ ಹಿನ್ನೆಲೆಯಲ್ಲಿ ಶೇ.೫೦ ಕ್ಕೆ ಮೀಸಲಾತಿ ಮಿತಿಗೊಳಿಸಿ, ೧೯೯೪ ರಲ್ಲಿ ಹೊಸ ಆದೇಶವೊಂದು ಹೊರಡಿಸಲಾಯಿತು. ಇದರನ್ವಯ ಪ್ರವರ್ಗ-೧ ಕ್ಕೆ ಶೇ. ೪, ಪ್ರವರ್ಗ-೨ಎ ಗೆ ಶೇ.೧೫, ಪ್ರವರ್ಗ-೨ಬಿಗೆ ಶೇ.೪, ಪ್ರವರ್ಗ-೩ಎ ಗೆ ಶೇ.೪, ಪ್ರವರ್ಗ-೩ಬಿ ಗೆ ಶೇ.೫, ಪರಿಶಿಷ್ಟ ಜಾತಿ ಶೇ.೧೫, ಪರಿಶಿಷ್ಟ ಪಂಗಡಕ್ಕೆ ಶೇ. ೩ ರಷ್ಟು ಮೀಸಲು ನಿಗದಿಗೊಳಿಸಿ, ಆದೇಶಿಸಲಾಗಿತ್ತು.ಈ ಮೀಸಲಾತಿಯಲ್ಲಿ ಇಸ್ಲಾಮ್ ಧರ್ಮ ಪಾಲನೆ ಮಾಡುವ ಮುಸ್ಲಿಂ ಜನಾಂಗಕ್ಕೆ ೨ಬಿ ಮೀಸಲು ಸೌಲಭ್ಯ ಒದಗಿಸಲಾಗಿತ್ತು. ಇದಕ್ಕಾಗಿ ಶೇ.೪ ರಷ್ಟು ಮೀಸಲಾತಿ ಒದಗಿಸಲಾಗಿದೆ. ಆದರೆ, ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೆಲ ಜಾತಿ, ಉಪ ಜಾತಿ, ಪ್ರವರ್ಗ-೧, ಪ್ರವರ್ಗ-೨ (ಎ) ಗೆ ಸೇರಿಸಲಾಯತು. ಈ ಆದೇಶದ ಪ್ರಕಾರ ಮುಸ್ಲಿಂ ಜನಾಂಗ ಒಟ್ಟು ಶೇ.೨೩ ರಷ್ಟು ಮೀಸಲಾತಿ ಅನುಭವಿಸುತ್ತಿದೆಂದು ಅವರು ಉಲ್ಲೇಖಿಸಿದರು. ಪ್ರವರ್ಗ-೧ ರಲ್ಲಿ ಮುಸ್ಲಿಂ ಜಾತಿ, ಉಪ ಜಾತಿಗಳಾದ ಕಸಾಬ, ಕಸಾಯಿ, ಅಟಾರಿ, ಶಿಕಕಾಲ್ಲಿಗೆರ್, ಶಿಕ್ಕಲಿಗೇರಾ, ಸಾಲಬಂದ, ಟಕನಕರ, ಛಪ್ಟರಬಂದ, ದರವೇಸು, ಜೊಹರಿ, ಫುಲ್ಲಮಾಲಿ ಮತ್ತು ಪಿಂಜಾರ ಒಟ್ಟು ೧೩ ಸಮುದಾಯಗಳು ಶೇ. ೪ ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ.ಪ್ರವರ್ಗ-೨ (ಎ) ರಲ್ಲಿ ಧೋಬಿ, ಲೂಹಾರ್, ಸೂನಾರ್, ಆತಾರಿ, ಆಧಾರಿ, ಫುಲ್‌ಮಾಲಿ, ಫುಲ್ಲಾರಿ, ಪೂರ್ಲಾಪ, ಕಸಬಿನ, ದರ್ಜಿ, ಕಂಗಾರಿ, ಪುಟ್ಕರ್, ಜುಲೋಹಿನ್, ಪಟ್ಟಿಗಾರ್, ಪಟ್ಟೇಗಾರ್ ಮತ್ತು ಒಟ್ಟೆಗಿರಿ ಒಟ್ಟು ೧೭ ಉಪ ಜಾತಿಗಳು ಶೇ.೧೫ ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಪ್ರವರ್ಗ-೨ಬಿ ಯಲ್ಲಿ ಮುಸ್ಲಿಂ ಜನಾಂಗ ಶೇ.೪ ರಷ್ಟು ಮೀಸಲಾತಿಯನ್ನು ಹೊಂದಿವೆಂದು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಮುಸ್ಲಿಂ ಧರ್ಮದ ಎಲ್ಲಾ ಜಾತಿ, ಉಪ ಜಾತಿಗಳನ್ನು ಪ್ರವರ್ಗ-೨ ಬಿ ಯಲ್ಲಿ ಸೇರಿಸಿ ಆದೇಶಿಸಬೇಕು. ಸರ್ಕಾರ ಮುಸ್ಲಿಂ ಸಮುದಾಯಕ್ಕೆ ರಾಜಕೀಯಕ್ಕೊಂದು ಮತ್ತು ಶಿಕ್ಷಣ ಸೌಲಭ್ಯಕ್ಕೆ ಒಂದು ಮೀಸಲಾತಿಯನ್ನು ಒದಗಿಸಿದೆ. ಇದನ್ನು ತಕ್ಷಣವೇ ರದ್ದುಗೊಳಿಸಿ, ಒಂದೇ ಮೀಸಲಾತಿಯಡಿ ಅವರಿಗೆ ಸೌಕರ್ಯ ಒದಗಿಸಬೇಕು. ಇಂತಹ ಗೊಂದಗಳಿಂದಾಗಿ ಹಿಂದುಳಿದ ವರ್ಗದ ಸಮುದಾಯಗಳು ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಕೇಳುವಂತಹ ಪ್ರಮೇಯ ನಿರ್ಮಾಣವಾಗಿದೆ.ಈ ರೀತಿ ಮೀಸಲಾತಿ ಬೇಡಿಕೆ ಮುಂಡಿಸಿದರೇ, ಮೂಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನ ಎಲ್ಲಿಗೆ ಹೋಗಬೇಕು ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ. ೧೫ ದಿನದೊಳಗೆ ಸಂವಿಧಾನ ವಿರುದ್ಧ ಜಾರಿಯಾದ ಆದೇಶವನ್ನು ರದ್ದುಪಡಿಸದಿದ್ದರೇ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿಯ ಅಂಬಾಜಿ, ಭೀಮೇಶ ಗಾಣದಾಳ, ಒಕ್ಕೂಟದ ಜಿಲ್ಲಾಧ್ಯಕ್ಷ ಆಂಜಿನೇಯ್ಯ ಉಪಸ್ಥಿತರಿದ್ದರು.