ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸುಗೂರು : ಮಾರ್ಚ ತಿಂಗಳ ಮೊದಲ ವಾರದಲ್ಲಿ ರಾಜ್ಯ ಸರ್ಕಾರ 2021-22ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ ಮಾಡುವ ಸಂಭವವಿದ್ದು ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಸಂಬಂಧಿತ ಯೋಜನೆಗಳಿಗೆ ಸೂಕ್ತ ಅನುದಾನವನ್ನು ಮೀಸಲಿಡುವಂತೆ ಆಗ್ರಹಿಸಿ ಎಸ್.ಐ.ಓ ಲಿಂಗಸೂಗೂರ ಘಟಕ ಅಧ್ಯಕ್ಷರು ಶೇಕ್ ಆಫ್ರಿದಿ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂದಾಜು ಸುಮಾರು ಎರಡು ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಘೋಷಿಸುವ ಕರ್ನಾಟಕ ರಾಜ್ಯವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 2019-20ರ ವಾರ್ಷಿಕ ರಾಜ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟು 2015.31 ಕೋಟಿ ರೂಪಾಯಿಯಷ್ಟು ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಕಳೆದ ವರ್ಷ 2020-21ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟು 1052.02 ಕೋಟಿ ಅನುದಾನವನ್ನು ಮೀಸಲಿಡುವ ಮೂಲಕ ಶೇಕಡಾ 44% ಪ್ರತಿಶತದಷ್ಟು ಅಂದರೆ 963.29 ಕೋಟಿ ರೂಪಾಯಿ ಅನುದಾನವನ್ನು ಕಡಿತ ಮಾಡಿತ್ತು. ಇದರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನೇಕ ಯೋಜನೆಗಳನ್ನು ಅನುದಾನದ ಕೋರತೆಯಿಂದ ನಿಲ್ಲಿಸಲಾಯಿತು ಮತ್ತು ಕೆಲವು ಯೋಜನೆಗಳನ್ನು (ಪರಿಷ್ಕರಿಸಲಾಯಿತು) ತಿದ್ದುಪಡಿ ಮಾಡಲಾಯಿತು ಅದರಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ಯೋಜನೆಗಳು ಒಳಗೊಂಡಿವೆ.
2020-21 ರ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 125.00 ಕೋಟಿ ರೂಪಾಯಿ ಅನುದಾನವನ್ನು ಹಂಚಿಕೆ ಮಾಡಿತ್ತು. ಆದರೆ ಘೋಷಿಸಿದ್ದ ಅನುದಾನವನ್ನು ಪರಿಷ್ಕರಿಸಿ 105.04 ಕೋಟಿ ರೂಪಾಯಿಗೆ ಇಳಿಸಿತು, ಪುನಃ ಎರಡನೆ ಬಾರಿ ಪರಿಷ್ಕರಿಸಿ 33.00 ಕೋಟಿ ರೂಪಾಯಿ ಯಷ್ಟು ಅನುದಾನ ಕಡಿತ ಮಾಡಿದ್ದು, ಪ್ರಸ್ತುತ 71.54 ಕೋಟಿ ರೂಪಾಯಿಗೆ ಇಳಿಸಿ, ಪರಿಷ್ಕೃತ ಸರ್ಕಾರಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿತು. ಈ ಆದೇಶದಿಂದ ಕೆಎಂಡಿಸಿಯ ಅನೇಕ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಯಿತು. ನಿಗಮವು ಶಿಕ್ಷಣ ಸಂಬಂಧಿತ ಹಲವು ಯೋಜನೆಗಳನ್ನು ತಿದ್ದುಪಡಿ ಮಾಡುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಸೌಲಭ್ಯ ವಂಚಿತರನ್ನಾಗಿ ಮಾಡಿದೆ. ಸರ್ಕಾರ ಕಡಿತ ಮಾಡಿ ಉಳಿಸಿದಂತಹ ಸೀಮಿತ ಅನುದಾನದಲ್ಲಿ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ನಿಗಮಕ್ಕೆ ಸಾಧ್ಯವಿಲ್ಲದಂತಾಗಿದೆ.
‘ಪಿ.ಎಚ್.ಡಿ ಪೆಲೋಶಿಫ್’ ಮತ್ತು ‘ಅರಿವು ವಿದ್ಯಾಭ್ಯಾಸ ಸಾಲ’ ಯೋಜನೆಯನ್ನು ತಿದ್ದುಪಡಿ ಮಾಡಿ ಸರ್ಕಾರ ಪರಿಸ್ಕೃತ ಆದೇಶ ಹೊರಡಿಸಿದೆ ಇದರಿಂದ ಅನೇಕ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರೆಸಲು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿ ಬರುವ ಎಲ್ಲಾ ಶೈಕ್ಷಣಿಕ ಅಭಿವೃದ್ದಿಯ ಯೋಜನೆಗಳಿಗೆ ಅಗತ್ಯಗನುಗುಣನವಾಗಿ ಅನುದಾನ ಮೀಸಲು ಇಡುವ ಮೂಲಕ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂಬುದು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಬಂಧಿತ ಯೋಜನೆಗಳನ್ನು ಮುಂದುವರೆಸಲು ಸೂಕ್ತ ಅನುದಾನವನ್ನು ಒದಗಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ. ರಾಜ್ಯದ ಅಲ್ಪಸಂಖ್ಯಾತ ಸಮುದಾಯದಲ್ಲಿ ಬಹುತೇಕ ಜನರು ಬಡತನ ರೇಖೆಗಿಂತ ಕೆಳಗೆ ಇದ್ದು ಅವರ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವುದು ಸಾಮಾಜಿಕ ನ್ಯಾಯದ ಬೇಡಿಕೆಯಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕು.
ರಾಜ್ಯದ ಆಯವ್ಯಯವನ್ನು ತಯಾರಿಸುವಾಗ ಸಂವಿದಾನದ ಆಶಯವನ್ನು ಮುಂದಿಟ್ಟುಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನವಾಗಬೇಕು. ಈ ನಿಟ್ಟಿನಲ್ಲಿ ಸಮಾಜದಿಂದ ಕಡೆಗಣಿಸಲ್ಪಟ್ಟ ಅಥವಾ ನಿರ್ಲಕ್ಷಕ್ಕೆ ಒಳಗಾದ ಪ್ರಜೆಗಳನ್ನು ಸಭಲರನ್ನಾಗಿ ಮಾಡುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ.
ಇದಕ್ಕೆ ಸಂಬಂಧಿಸಿದಂತೆ ವಾರ್ಷಿಕ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಮೀಸಲಿಡುವುದು ಅದನ್ನು ಅನುಷ್ಠಾನಕ್ಕೆ ತರಲು ಹಣ ಬಿಡುಗಡೆ ಮಾಡುವುದು ಪ್ರಮುಖವಾಗಿದೆ.
ರಾಜ್ಯ ಸರ್ಕಾರವು ಕೋವಿಡ್ ನ ಆರ್ಥಿಕ ಬಿಕ್ಕಟ್ಟನ್ನು ನೆಪವಾಗಿಸಿಕೊಂಡು ಅಲ್ಪಸಂಖ್ಯಾತರ ಹಲವು ಪ್ರಮುಖ ಯೋಜನೆಗಳಿಗೆ ಅನುದಾನದವನ್ನು ಕಡಿತ ಮಾಡಿದ್ದು ಮತ್ತು ಕಳೆದ ಎರಡು ವರ್ಷಗಳ ಬಜೆಟ್ ನಲ್ಲಿಯೂ ಕೂಡಾ ಅನುದಾನವನ್ನು ಕಡಿಮೆ ಮಾಡುತ್ತಾ ಬಂದಿದೆ. ಇದಲ್ಲದೆ ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಿಗೆ ಸಮರ್ಪಕ ಅನುದಾನವನ್ನು ಸಹ ಒದಗಿಸುತ್ತಿಲ್ಲ. ಇದರೊಂದಿಗೆ ಅಲ್ಪಸಂಖ್ಯಾತರ ಶೈಕ್ಷಣಿಕ ಪ್ರೋತ್ಸಾಹದ ಅನೇಕ ಕಾರ್ಯಕ್ರಮಗಳನ್ನು ಪರಿಷ್ಕರಿಸಿ ಅರ್ಹ ಅಭ್ಯರ್ಥಿಗಳಿಗೆ ಸೌಲಭ್ಯ ವಂಚಿತನ್ನಾಗಿ ಮಾಡಿದೆ.
ಇವೆಲ್ಲವೂ ಅಲ್ಪಸಂಖ್ಯಾತರ ಮೇಲಿನ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿವೆ. ಆದ್ದರಿಂದ 2021-22ರ ವಾರ್ಷಿಕ ರಾಜ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಇಲಾಖೆಯಡಿ ಚಾಲ್ತಿಯಲ್ಲಿರುವ ಎಲ್ಲಾ ಶಿಕ್ಷಣ ಸಂಬಂಧಿತ ಯೋಜನೆಗಳನ್ನು ಮುಂದುವರೆಸಲು ಅಗತ್ಯಗನುಗುಣವಾಗಿ ಅನುದಾನವನ್ನು ಮೀಸಲಿಡಬೇಕೆಂದು ಸ್ಟೂಡೇಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (ಎಸ್.ಐ.ಓ) ಲಿಂಗಸೂಗೂರ ಘಟಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ.