ವಿಜಯನಗರವಾಣಿ ಸುದ್ದಿ
ಕಂಪ್ಲಿ: ದೇಶದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತಿ ಹಾಕಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ಜಿಪಂ ಸದಸ್ಯ ಹಾಗೂ ಟಚ್ ಫಾರ್ ಲೈಫ್ ಫೌಂಡೇಷನ್ ಸಂಸ್ಥೆ ಸಂಸ್ಥಾಪಕ ನಾರಾ ಭರತ್ ರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕೆಪಿಎಲ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ಯುವ ಮುಖಂಡ ಅಮಿತ್ ಗೌಡ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಸೇರಿದಂತೆ ವಿವಿಧ ಸಾಮಾಗ್ರಿಗಳ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರನ್ನು ದಿವಾಳಿಯನ್ನಾಗಿ ಮಾಡಲು ಹೊರಟಿದೆ. ದಿನನಿತ್ಯದ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದ ಪರಿಣಾಮ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಸಂಕಷ್ಟಕ್ಕೆ ಸಿಲುಕುವ ಜತೆಗೆ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಬೆಲೆ ಏರಿಕೆ ಇಳಿಸಲು ಹಾಗೂ ದೇಶದ ಜನರ ನೆಮ್ಮದಿಯ ಬದುಕು ಕಟ್ಟಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಕಾಂಗ್ರೆಸ್ ಅಧಿಕಾರ ಬಂದರೆ ಮಾತ್ರ ಬೆಲೆ ಏರಿಕೆಗಳು ಇಳಿಕೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ದೇಶದ ಜನರು ಬಿಜೆಪಿ ಪಕ್ಷವನ್ನು ಬುಡ ಸಮೇತವಾಗಿ ಕಿತ್ತಿ ಹಾಕಲು ಸಿದ್ಧರಾಗಬೇಕು. ಕಂಪ್ಲಿ ಸಕ್ಕರೆ ಕಾರ್ಖಾನೆ ಜಾಗ ರೈತರ ಆಸ್ತಿ. ಸರ್ಕಾರ ಮತ್ತು ಸಹಕಾರಿ ವಲಯದಲ್ಲಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಗೊಳ್ಳಬೇಕು. ಆದರೆ, ಬಿಜೆಪಿಯವರು ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿ ವಲಯದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಮುಂದಾಗಿರುವುದು ರೈತರಿಗೆ ಅನ್ಯಾಯ ಎಸಗಿ, ಸಕ್ಕರೆ ಕಾರ್ಖಾನೆ ಜಾಗ ಕಬಳಿಸುವ ಹುನ್ನಾರವಾಗಿದೆ. ಸಕ್ಕರೆ ಕಾರ್ಖಾನೆ ಜಾಗ ಹೊಡೆಯುವ ಉದ್ದೇಶದಿಂದ ಮಾಜಿ ಶಾಸಕ ಸುರೇಶ್ ಬಾಬು ಅವರು ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಬೇಕಿದ್ದ ಕಂಪ್ಲಿಯನ್ನು ತಡೆಹಿಡಿದಿದ್ದಾರೆ. ಸುರೇಶ್ ಅವರ ಉದ್ದೇಶ ಬೇರೆಯವರ ಆಸ್ತಿ ಹೊಡೆಯುವದಾಗಿದೆ. ಹತ್ತು ವರ್ಷದಲ್ಲಿ ಜನರ ಕೆಲಸ ಮಾಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸುರೇಶ್ ಬಾಬು ಅವರು ಎಂಎಲ್ಎ ಆಗುವ ಕನಸು ಹುಸಿಯಾಗಲಿದೆ. ಈಗಾಗಲೇ ಕಾಂಗ್ರೆಸ್ ಬಿರುಗಾಳಿ ಬೀಸಿದ್ದು, ಯುವಕರಲ್ಲಿ ಉತ್ಸಾಹ ತರುವ ಮೂಲಕ ಮುಂಬರುವ ತಾಪಂ, ಜಿಪಂ ಸೇರಿದಂತೆ ಇನ್ನಿತರ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೆಗೌಡ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಿಗಿ ಬಸವರಾಜಗೌಡ, ಪುರಸಭೆ ಸದಸ್ಯ ಮೌಲಾ, ಕಂಪ್ಲಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಶಿಕುಮಾರ್, ಮುಖಂಡರಾದ ಹೊಸಕೋಟೆ ಜಗದೀಶ, ಬಳೆ ಮಲ್ಲಿಕಾರ್ಜುನ, ಕೆ.ತಿಮ್ಮಯ್ಯ, ಅಮಿತ್ ಗೌಡ, ಕಂಬಳಿ ರಾಮಕೃಷ್ಣ, ಪಿ.ಶಂಭು, ಕಿಟ್ಟಿ, ಶೀನು, ವಿಬಿ ನಾಗರಾಜ, ಮಣ್ಣೂರು ನಾಗರಾಜ, ವಿ.ಮೌನೇಶ್, ಯುಸೂಫ್, ಖಾಜಾಹುಸೇನ್, ರಿಯಾಜ್, ರಮೇಶ ಸೇರಿದಂತೆ ಯುವಕರು ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.