ಬಳ್ಳಾರಿ, ಪತ್ರಿಕೋದ್ಯಮ ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗಿದ್ದು, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಒಳಗೊಂಡಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ.ಸಿ.ಆರ್.ಗೋವಿಂದರಾಜು ಅವರು ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಮಾಧ್ಯಮ ಕ್ಷೇತ್ರ ಒತ್ತಡದ ಕೆಲಸದಿಂದ ವಿವಿಧ ರೋಗಗಳನ್ನು ತರಬಲ್ಲದು. ಅದನ್ನು ನಿಭಾಯಿಸುವ ಸಾಮಥ್ರ್ಯಗಳಿಸಿಕೊಳ್ಳುವುದು ಮುಖ್ಯ. ಮಾಧ್ಯಮ ಕೆಲಸ ಕಾರ್ಯಗಳು ತಾಳ್ಮೆ, ನಿರಂತರ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಬೇಡುತ್ತವೆ. ಭವಿಷ್ಯದ ಪತ್ರಕರ್ತರಾಗಲು ಹೊರಟಿರುವ ವಿದ್ಯಾರ್ಥಿಗಳು ಇವುಗಳನ್ನು ಇಂದಿನಿಂದಲೇ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಅಧ್ಯಯನಾಂಗದ ನಿರ್ದೇಶಕರಾದ ಡಾ.ಪಿ.ಮಹಾದೇವಯ್ಯ ಅವರು ಮಾತನಾಡಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಉತ್ತಮ ರೀತಿಯಲ್ಲಿ ಕೆಲಸ–ಕಾರ್ಯಗಳನ್ನು ನಿರ್ವಹಿಸುತ್ತಿದೆ. ಪಠ್ಯ ಮತ್ತು ಪ್ರಾಯೋಗಿಕ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅದರ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಮಾತನಾಡಿ ಪತ್ರಿಕೋದ್ಯಮ ಕ್ಷೇತ್ರ ಹೊಸ ಹೊಸ ಸಾಹಿತಿಗಳು ಬೆಳಕಿಗೆ ತರುವಲ್ಲಿ ಮಹತ್ವದ ಪಾತ್ರವಹಿಸಿದೆ. ಕನ್ನಡ ಭಾಷೆಯನ್ನು ಸಂದರ್ಭಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಮಾಧ್ಯಮ ಕ್ಷೇತ್ರ ಬಳಸುವುದು ಮುಖ್ಯ ಎಂದು ತಿಳಿಸಿದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವೈ.ಸೋಮಶೇಖರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ, ದೃಶ್ಯಕಲಾ ವಿಭಾಗದ ಡಾ.ಕೃಷ್ಣೇಗೌಡ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಲೋಕೇಶ ಎಸ್.ಕೆ, ಸಂತೋಷಕುಮಾರ್, ಕೆ.ಪದ್ಮಾವತಿ ಮತ್ತು ಇತರರು ಇದ್ದರು.