ಬಳ್ಳಾರಿ, ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಯಾವ್ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬುದರ ಕುರಿತು 100 ದಿನಗಳ ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಶಕ್ತಿ ಅಭಿಯಾನದಡಿ ಜಲಸಂರಕ್ಷಣೆ ಮತ್ತು ಮಳೆನೀರು ಕೊಯ್ಲು,ಸಾಂಪ್ರಾದಾಯಿಕ ಮತ್ತು ಇತರೆ ಜಲಮೂಲಗಳು/ಕೆರೆಗಳ ನವೀಕರಣ,ಬೋರವೆಲ್‍ಗಳ ಮರುಪೂರಣ ಮತ್ತು ಮರುಬಳಕೆ,ಜಲಾನಯನ ಅಭಿವೃದ್ಧಿ,ವ್ಯಾಪಕರ ಅರಣ್ಯೀಕರಣ ಕೈಗೆತ್ತಿಕೊಳ್ಳುವುದಾಗಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 1ರಿಂದ ಜೂನ್ ಅಂತ್ಯದವರೆಗೆ ಅಂದರೇ 100 ದಿನಗಳ ಕ್ರಿಯಾಯೋಜನೆಯನ್ನು ವಿವರವಾಗಿ ರೂಪಿಸಿ ಸಲ್ಲಿಸಿ. ಈಗಾಗಲೇ ರೂಪಿಸಿದ್ದರೇ ಅದನ್ನು ಕಾರ್ಯಪ್ರವೃತ್ತಗೊಳಿಸುವಂತೆ ಸೂಚನೆ ನೀಡಿದ ಡಿಸಿ ಮಾಲಪಾಟಿ ಅವರು 100 ದಿನಗಳಲ್ಲಿ ಜಲಶಕ್ತಿ ಅಭಿಯಾನದಡಿ ಕಣ್ಣಿಗೆ ಕಾಣುವಂತ ಅಭಿವೃದ್ಧಿಯನ್ನು ಇಲಾಖೆಯ ಅಧಿಕಾರಿಗಳು ಮಾಡುವ ನಿಟ್ಟಿನಲ್ಲಿ ಮುಂದಾಗಿ ಎಂದು ಅವರು ಸಲಹೆ ನೀಡಿದರು.
ಜಲಸಂರಕ್ಷಣೆಯ ವಿಕೇಂದ್ರೀಕರಣದ ಪರಿಣಾಮದಿಂದಾಗಿ ಮಣ್ಣಿನ ತೇವಾಂಶ ಮತ್ತು ಸಸ್ಯ ಸಂಪತ್ತಿನ ವೃದ್ಧಿ,ಅಂತರ್ಜಲ ಮಟ್ಟದ ಏರಿಕೆ, ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಅಂತರ್ಜಲವನ್ನು ಬಳಸಲು ಕಡಿಮೆ ಅಶ್ವಶಕ್ತಿ ಪಂಪ್‍ಗಳನ್ನು ಉಪಯೋಗಿಸುವುದರಿಂದ ಉಳಿತಾಯವಾಗುತ್ತದೆ. ನಗರ ಪ್ರದೇಶಗಳ ತಗ್ಗು ಪ್ರದೇಶಗಳಲ್ಲಿ ವಾಹನಗಳನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಲಶಕ್ತಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಪ್ರತಿ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಕಲ್ಯಾಣಿ,ನಾಲಾಗಳು ಮುಂತಾದ ಸಾಂಪ್ರದಾಯಿಕ ಜಲಮೂಲಗಳ ಒತ್ತುವರಿಯನ್ನು ತೆರವುಗೊಳಿಸಲು ಎಲ್ಲ ತಾಲೂಕುಗಳ ತಹಸೀಲ್ದಾರರಿಗೆ ಸೂಚಿಸಲಾಗುವುದು. ಒತ್ತುವರಿ ತೆರವುಗೊಳಿಸಿ ಪುನಶ್ಚೇತಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
*ಗ್ರಾಪಂವಾರು ಬೋರವೆಲ್‍ಗಳ ವಾಟಲ್ ಲೇವೆಲ್ ಮಾಹಿತಿ ನೀಡಿ: ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಳಸುವ ಬೋರವೆಲ್‍ಗಳ ವಾಟರ್‍ಲೇವೆಲ್ ಟೇಬಲ್ ಮಾಹಿತಿ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಎಂಜನಿಯರ್ ಅವರಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸೂಚನೆ ನೀಡಿದರು.
ಈ ಬೋರವೆಲ್‍ಗಳಿಗೆ ಆದ್ಯತೆಯ ಮೇರೆಗೆ ರಿಚಾರ್ಜ್ ಪಿಟ್ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಶಾಲೆಗಳು ಮತ್ತು ವಸತಿನಿಲಯಗಳಿಗೆ ಮಳೆನೀರು ಕೊಯ್ಲು ಅಳವಡಿಸುವುದು,ಹಾಸ್ಟೆಲ್ ಕಟ್ಟಡಗಳ ಆವರಣಗಳಲ್ಲಿ ಸ್ವಚ್ಛತೆ ಕಾಪಾಡಲು ಬಚ್ಚಲುಗುಂಡು ನಿರ್ಮಿಸಬೇಕು ಮತ್ತು ಪೌಷ್ಠಿಕ ತೋಟ ಮಾಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಲಶಕ್ತಿ ಕೇಂದ್ರಗಳ ಮೂಲಕ ಜಲಸಂಪನ್ಮೂಲಗಳ ಗುರುತಿಸುವಿಕೆ ಮತ್ತು ಜಲಸಂರಕ್ಷಣೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
*ಸಣ್ಣ ನೀರಾವರಿ ಅಡಿ 89 ಕೆರೆಗಳು: ಬಳ್ಳಾರಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಡಿ 89 ಕೆರೆಗಳು ಬರುತ್ತಿದ್ದು,ಅವುಗಳಲ್ಲಿ 2 ಕೆರೆಗಳು ತಾತ್ಕಾಲಿಕ ಒತ್ತುವರಿಯಾಗಿವೆ;ಅವುಗಳ ಒತ್ತುವರಿ ತೆರವುಗೊಳಿಸಲು ಕ್ರಮವಹಿಸುವುದಾಗಿ ಸಣ್ಣ ನೀರಾವರಿ ಎಂಜನಿಯರ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಮಾಲಪಾಟಿ ಅವರು ಕೂಡಲೇ ಕೆರೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ ಅವರು ಈ ವರ್ಷ 20 ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿಕೊಂಡು ಕೆರೆಹೂಳೆತ್ತುವಿಕೆ,ಕೆರೆ ಏರಿ ದುರಸ್ಥಿ,ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಡುವಿಕೆ, ಕೆರೆ ಕೋಡಿ ಮತ್ತು ರೈತರ ಜಮೀನುಗಳಿಗೆ ನೀರು ಹರಿದುಹೋಗುವ ಕಾಲುವೆಗಳನ್ನು ದುರಸ್ತಿಗೊಳಿಸುವಂತೆ ತಿಳಿಸಿದರು.
*ಹೊಸ ಕೆರೆ ನಿರ್ಮಾಣ: ಗ್ರಾಪಂ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಕೆರೆಗಳನ್ನು ಈ ಜಲಶಕ್ತಿ ಅಭಿಯಾನದಡಿ ನಿರ್ಮಿಸುವುದಕ್ಕೆ ಕ್ರಿಯಾಯೋಜನೆ ರೂಪಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸೂಚನೆ ನೀಡಿದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಕಲ್ಯಾಣಿಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸಲಾಗುವುದು. ನಾಲಾ ಪುನಶ್ಚೇತನ,ಗೋಕಟ್ಟೆಗಳ ನಿರ್ಮಾಣ, ರೈತರ ಜಮೀನುಗಳಲ್ಲಿ ಬದು,ಕೃಷಿಹೊಂಡ ಮತ್ತು ತೆರೆದ ಬಾವಿಗಳ ನಿರ್ಮಾಣಕ್ಕೂ ಕ್ರಮವಹಿಸಲಾಗುವುದು ಎಂದರು.
ಜಲಶಕ್ತಿ ಅಭಿಯಾನಕ್ಕೆ ಪ್ರಧಾನಮಂತ್ರಿಗಳು ಮಾ.22ರಂದು ಚಾಲನೆ ನೀಡಿದ್ದಾರೆ. ಈ ವರ್ಷದ ಘೋಷವಾಕ್ಯ ಕ್ಯಾಚ್ ದೀ ರೇನ್-ವೇರ್ ಇಟ್ ಫಾಲ್ಸ್,ವೆನ್ ಇಟ್ ಫಾಲ್ಸ್ ಎಂಬುದಾಗಿದೆ. ಈ ಅಭಿಯಾನ ನವೆಂಬರ್ 30ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಜಲಶಕ್ತಿ ಅಭಿಯಾನದಡಿ ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕಾರ್ಯನಿರ್ವಾಹಕ ಎಂಜನಿಯರ್ ಕಾಳಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.