ಕೋವಿಡ್ ಚಿಕಿತ್ಸೆ ಖಾಸಗಿ ಆಸ್ಪತ್ರೆಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ “ಆಕ್ಸಿಜನ್ ಸಮಸ್ಯೆ ಇಲ್ಲ;ರೆಮ್ಡೆಸಿವಿರ್ ಚುಚ್ಚುಮದ್ದು ನೀಡಿ”

Share and Enjoy !

Shares
Listen to this article

ಬಳ್ಳಾರಿ,ಏ.24 : “ನಮ್ಮಲ್ಲಿ ದಾಖಲಾಗುವ ಸೊಂಕಿತರಿಗೆ ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆಗಳಿಲ್ಲ;ಸಮಸ್ಯೆ ಇರುವುದು ರೆಮ್ಡೆಸಿವಿ ಚುಚ್ಚುಮದ್ದಿನದ್ದು ಮಾತ್ರ;ಅದನ್ನು ಒದಗಿಸಿಕೊಡಿ..”ಹೀಗೆಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಅವರಲ್ಲಿ ಕೇಳಿಕೊಂಡಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರಿಗೆ ಚಿಕಿತ್ಸೆ ಒದಗಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು.ರೆಮ್ಡೆಸಿವಿರ್ ಚುಚ್ಚುಮದ್ದು ಪಡೆದುಕೊಂಡರೇ ಅರಾಮವಾಗ್ತೇವೆ ಎನ್ನುವ ಮನೋಭಾವನೆ ಜನರಲ್ಲಿ ಮೂಡಿದೆ;ಶ್ವಾಸಕೋಶಕ್ಕೆ ಇನ್‍ಫೆಕ್ಷನ್ ಸರಿಮಾಡುತ್ತದಷ್ಟೇ;ಪರಿಣಾಮಕಾರಿಯಾದುದಲ್ಲ.ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಬೇಸರವನ್ನು ಅವರು ಹೊರಹಾಕಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಈಗಾಗಲೇ ಖಾಸಗಿ ಆಸ್ಪತ್ರೆಗಳಿಗಾಗಿ ಒಂದು ಸಾವಿರ ರೆಮ್ಡೆಸಿವಿರ್ ಚುಚ್ಚುಮದ್ದು ಕೇಳಿ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಒಂದು ವಾರದೊಳಗೆ ತಮಗೆಲ್ಲರಿಗೂ ಒದಗಿಸಲಾಗುವುದು ಎಂದರು.ಸೊಂಕಿತರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು ತಮ್ಮ ಕರ್ತವ್ಯ ಎಂಬುದನ್ನು ಸಭೆಯಲ್ಲಿ ಒತ್ತಿ ಹೇಳಿದ ಸಚಿವ ಸಿಂಗ್ ಅವರು ತಮ್ಮಲ್ಲಿರುವ ಸೊಂಕಿತರ ಸ್ಥಿತಿಗತಿ ಗಂಭೀರವಾದಲ್ಲಿ ತಕ್ಷಣ ಸಮನ್ವಯ ವಹಿಸಿ ಜಿಲ್ಲಾಡಳಿತದ ಸುಪರ್ಧಿಯಲ್ಲಿರುವ ಆಸ್ಪತ್ರೆಗಳಿಗೆ ಕಳುಹಿಸಿಕೊಡಬೇಕು ಎಂದರು.ಕಂಪ್ಲಿಯ ಅಭಯ್ ಆಸ್ಪತ್ರೆಗೆ ಕೋವಿಡ್ ಷರತ್ತಿಗೊಳಪಟ್ಟು ಕೋವಿಡ್ ಸೊಂಕಿತರಿಗೆ ಚಿಕಿತ್ಸೆಗೆ ನೀಡಲು ಸಭೆಯಲ್ಲಿ ಅನುಮತಿ ನೀಡಿದರು.ಆಕ್ಸಿಜನ್ ಅಗತ್ಯ ಇರುವ ಸೊಂಕಿತರಿಗೆ ಆಕ್ಸಿಜನ್ ಬೆಡ್‍ಗಳು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಆ ಸಮಿತಿ ಶಿಫಾರಸ್ಸಿನ ಅನ್ವಯ ಸೊಂಕಿತರಿಗೆ ಆಕ್ಸಿಜನ್ ಬೆಡ್‍ಗಳು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.ನಮ್ಮಲ್ಲಿ ಬೆಡ್‍ಗಳು ತುಂಬಿದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದಾಗ ಆ ಸೊಂಕಿತರಿಗೆ ಬೆಡ್ ಒದಗಿಸುವಂತೆ ಡಿಎಚ್‍ಒ ಡಾ.ಜನಾರ್ಧನ್ ಅವರು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಿಗೆ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಖಾಸಗಿ ಆಸ್ಪತ್ರೆಗಳ ಅಹವಾಲುಗಳನ್ನು ಇದೇ ಸಂದರ್ಭದಲ್ಲಿ ಅವರು ಆಲಿಸಿದರು.ಈ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್,ಜಿಪಂ ಸಿಇಒ ಕೆ.ಆರ್.ನಂದಿನಿ,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ ಸೇರಿದಂತೆ ಇತರರು ಇದ್ದರು.

Share and Enjoy !

Shares