ಬಳ್ಳಾರಿ ನಗರದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಳವಳ:ಕ್ರಮಕೈಗೊಳ್ಳಲು ಸಚಿವ ಆನಂದ್ ಸಿಂಗ್ ಸೂಚನೆ

Share and Enjoy !

Shares
Listen to this article
ಬಳ್ಳಾರಿ,ಏ.24. ಬಳ್ಳಾರಿ ನಗರದಲ್ಲಿ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರ,ಜನರ ಹೆಚ್ಚಿನ ಓಡಾಟ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಇಡೀ ಜಿಲ್ಲೆಯಲ್ಲಿಯೇ ಬಳ್ಳಾರಿ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸೊಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ಜಿಲ್ಲೆಯ ಸ್ಥಿತಿಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸದ್ಯ 4522 ಸಕ್ರಿಯ ಪ್ರಕರಣಗಳಿದ್ದು,ಅವುಗಳಲ್ಲಿ ಬಳ್ಳಾರಿಯಲ್ಲಿಯೇ 2178 ಪ್ರಕರಣಗಳು ಸಕ್ರಿಯವಾಗಿವೆ.ದಿನೇ ದಿನೇ ಪ್ರಕರಣಗಳ ಸಂಖ್ಯೆಯೂ ಬಳ್ಳಾರಿ ನಗರದಲ್ಲಿ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಂದ ಸ್ಥಿತಿಗತಿಯ ವರದಿ ಪಡೆದುಕೊಂಡು ಮಾತನಾಡಿದರು. ಕೋವಿಡ್ 1ನೇ ಅಲೆಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದಂತೆ ಈ ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿಯೂ ಎಲ್ಲ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಈ ಕೋವಿಡ್ ಮಹಾಮಾರಿಯನ್ನು ಹತೋಟಿಗೆ ತರುವ ಕೆಲಸ ಮಾಡುವಂತೆ ಸೂಚಿಸಿದರು.
ಪ್ರತಿ ತಾಲೂಕುಗಳಲ್ಲಿ ಆಕ್ಸಿಜನ್ ಸ್ಥಿತಿಗತಿ ಕುರಿತು ವರದಿ ತರಿಸಿಕೊಳ್ಳಿ;ಅದರಂತೆ ಕ್ರಮವಹಿಸಿ ಮತ್ತು ಬಳ್ಳಾರಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಸೊಂಕಿತರಿಗೆ ಆಕ್ಸಿಜನ್ ಕೊರತೆಯಾಗದಂತೆ ಕ್ರಮವಹಿಸಿ ಎಂದು ಸಚಿವ ಸಿಂಗ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಟ್ರಾಮಾಕೇರ್ ಸೆಂಟರ್,ಒಲ್ಡ್ ಡೆಂಟಲ್ ಕಾಲೇಜು, ನ್ಯೂ ಡೆಂಟಲ್ ಕಾಲೇಜು, ಜಿಲ್ಲಾಸ್ಪತ್ರೆಯ ಆವರಣದ ನರ್ಸಿಂಗ್ ಕಟ್ಟಡ, ವಿಮ್ಸ್ ನಿರ್ದೇಶಕರ ಕಟ್ಟಡ ಸೇರಿದಂತೆ ಇನ್ನೀತರೆಡೆ ಕೋವಿಡ್ ಸೊಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,ಇನ್ನೂ ಹೆಚ್ಚಿನ ಸೊಂಕಿತರಿಗೆ ನೀಡುವ ದೃಷ್ಟಿಯಿಂದ ವಿಮ್ಸ್‍ನಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದೆಲ್ಲ ಚಿಕಿತ್ಸೆಗಳನ್ನು ಬಂದ್ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 30 ಬೆಡ್‍ಗಳನ್ನು ಹೆರಿಗೆ ಚಿಕಿತ್ಸೆಗಾಗಿ ಮೀಸಲಿಟ್ಟು ಉಳಿದೆಲ್ಲ ಬೆಡ್‍ಗಳನ್ನು ಕೋವಿಡ್‍ಗಾಗಿ ಪರಿವರ್ತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 1128 ಆಕ್ಸಿಜನ್ ಬೆಡ್‍ಗಳಿದ್ದು,ಅವುಗಳಲ್ಲಿ 700 ಆಕ್ಸಿಜನ್ ಬೆಡ್‍ಗಳು ಬಳ್ಳಾರಿ ನಗರದಲ್ಲಿವೆ;ಇವುಗಳಲ್ಲಿ 210 ಮಾತ್ರ ಸದ್ಯ ಖಾಲಿ ಇವೆ.ಉಳಿದ ತಾಲೂಕು ಕೇಂದ್ರಗಳಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಸದ್ಯಕ್ಕೆ ಕಂಡುಬಂದಿಲ್ಲ ಎಂದರು.
ಹೋಂ ಐಸೋಲೇಶನ್‍ನಲ್ಲಿರುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಉದ್ಬವಿಸಿಲ್ಲ;ಮುಂದೆ ಉದ್ಭವಿಸುವ ಸಾಧ್ಯತೆ ಇದ್ದು,ಇದಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ
ಆಕ್ಸಿಜನ್ ಉತ್ಪಾದನಾ ಘಟಕದ ಸಮೀಪವೇ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ ಸೊಂಕಿತರಿಗೆ ಚಿಕಿತ್ಸೆ ನೀಡಲು ಸರಕಾರ ಉದ್ದೇಶಿಸಿದ್ದು, ಜೆಎಸ್‍ಡಬ್ಲ್ಯೂ ಎದುರುಗಡೆಯ 1ಲಕ್ಷ ಚದರ ಅಡಿಯ ವಿಶಾಲ ಮೈದಾನದಲ್ಲಿ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ ಚಿಕಿತ್ಸೆ ಒದಗಿಸಲು ಜೆಎಸ್‍ಡಬ್ಲ್ಯೂಗೆ ಸರಕಾರ ಕೋರಿರುವ ಮಾಹಿತಿಯನ್ನು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸಚಿವರ ಗಮನಕ್ಕೆ ತಂದರು.
ಜಿಂದಾಲ್ ಸಂಸ್ಥೆಯು ವಿಶಾಲ್ ಮೈದಾನದಲ್ಲಿ ಜರ್ಮನ್ ತಂತ್ರಜ್ಞಾನ ಮಾದರಿಯ ಟೆಂಟ್ ಅಳವಡಿಸಿ, 1ಸಾವಿರ ಆಕ್ಸಿಜನ್ ಬೆಡ್‍ಗಳು ಹಾಗೂ ಇನ್ನೀತರ ವೈದ್ಯಕೀಯ ಪರಿಕರಗಳನ್ನು ಅಳವಡಿಸಿಕೊಂಡು ಸೊಂಕಿತರಿಗೆ ಚಿಕಿತ್ಸೆ ನೀಡಲು ತಿಳಿಸಲಾಗಿದೆ. ಸಮೀಪವೇ ಆಕ್ಸಿಜನ್ ಉತ್ಪಾದಿಸುವುದರಿಂದ ಕ್ಷೀಪ್ರಗತಿಯಲ್ಲಿ ಸೊಂಕಿತರಿಗೆ ಆಕ್ಸಿಜನ್ ಕೂಡ ಲಭ್ಯವಾಗಲಿದೆ ಎಂದರು.
ಈಗಾಗಲೇ ಸ್ಥಳಪರಿಶೀಲನೆ ಮಾಡಿಕೊಂಡು ಬರಲಾಗಿದೆ. ಈಗ ಕೆಲಸ ಶುರುಮಾಡಿದರೇ ಮೇ 15ರವರೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.ಇದರಿಂದ ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಸೊಂಕಿತರಿಗೆ ಚಿಕಿತ್ಸೆ ಒದಗಿಸಲು ಅನುಕೂಲವಾಗಲಿದೆ ಎಂದರು.
ಬೆಡ್,ಟೆಂಟ್ ಹಾಗೂ ಇನ್ನೀತರ ಸಾಮಗ್ರಿಗಳನ್ನು ಸ್ವತಃ ಜಿಂದಾಲ್ ಲೀಜ್ ಮೇಲೆ ತೆಗೆದುಕೊಳ್ಳಲಿದೆ ಎಂದು ವಿವರಿಸಿದ ಡಿಸಿ ಮಾಲಪಾಟಿ ಅವರು ರಾಜ್ಯ ಸರಕಾರ ಬಳ್ಳಾರಿ ಜಿಲ್ಲಾಡಳಿತಕ್ಕೆ 2 ಆಕ್ಸಿಜನ್ ಟ್ಯಾಂಕರ್‍ಗಳನ್ನು ಒಪ್ಪಂದದ(ಲೀಜ್) ಮೇಲಿಟ್ಟುಕೊಳ್ಳಲು ತಿಳಿಸಿದೆ.ಆಕ್ಸಿಜನ್ ತುರ್ತು ಅವಶ್ಯಕತೆ ಇರುವ ಜಿಲ್ಲೆಗಳಿಗೆ ಬಳ್ಳಾರಿಯಿಂದ ಕಳುಹಿಸಿಕೊಡುವ ದೃಷ್ಟಿಯಿಂದ ಎಂದರು.
ರೆಮ್ಡೆಸಿವಿರ್ ಚುಚ್ಚುಮದ್ದು,ಕೋವಿಡ್ ಲಸಿಕೆ ಕೊರತೆ ಇರುವುದನ್ನು ಡಿಎಚ್‍ಒ ಡಾ.ಜನಾರ್ಧನ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್,ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ ಮತ್ತಿತರರು ಇದ್ದರು.

Share and Enjoy !

Shares