ಮಡಿಕೇರಿ :ಬಿಳಿಗೇರಿ 22 ಮತ್ತು ಗಾಳಿಬೀಡು ಬಳಿ ನಿರ್ಮಿಸಿರುವ 140 ಒಟ್ಟು 162 ಮನೆಗಳ ಹಸ್ತಾಂತರ

Share and Enjoy !

Shares
Listen to this article

ಮಡಿಕೇರಿ -2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹಾಕತ್ತೂರು ಬಳಿಯ ಬಿಳಿಗೇರಿಯಲ್ಲಿ 22 ಮತ್ತು ಗಾಳಿಬೀಡು ಗ್ರಾಮದ ಬಳಿ ನಿರ್ಮಿಸಿರುವ 140 ಒಟ್ಟು 162 ಮನೆಗಳನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ಶುಕ್ರವಾರ ಹಸ್ತಾಂತರಿಸಿದರು.    

ಬಳಿಕ ಮಾತನಾಡಿದ ಸಚಿವರು ಈಗಾಗಲೇ ಮೊದಲ ಹಂತದಲ್ಲಿ ಕರ್ಣಂಗೇರಿಯಲ್ಲಿ 35 ಮನೆಗಳು, ಮಾದಾಪುರದ ಜಂಬೂರಿನಲ್ಲಿ 383, ಮದೆನಾಡು ಬಳಿ 80 ಮನೆಗಳು ಸೇರಿದಂತೆ ಒಟ್ಟು ಮೂರು ಹಂತದಲ್ಲಿ 660 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಉಳಿದಂತೆ ಕೆ.ನಿಡುಗಡೆ ಗ್ರಾ.ಪಂ.ಯ ಆರ್‍ಟಿಒ ಕಚೇರಿ ಬಳಿ 76 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಎರಡು ತಿಂಗಳಲ್ಲಿ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.  

ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ ಎಂದು ವಿ.ಸೋಮಣ್ಣ ಅವರು ತಿಳಿಸಿದರು.

ಇಡೀ ರಾಜ್ಯದಲ್ಲಿಯೇ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ 9.85 ಲಕ್ಷ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮಾದರಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಸಚಿವರು ಹೇಳಿದರು.

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಗಾಳಿಬೀಡು ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುವುದರಿಂದ ಮನೆಯ ಸುತ್ತ ಅಗತ್ಯ ಹುಲ್ಲು ಬೆಳೆಸುವುದು ಮತ್ತಿತರ ಕಾಮಗಾರಿ ಕೈಗೊಳ್ಳುವಂತೆ ಸಲಹೆ ಮಾಡಿದರು. 

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಚಾರುಲತ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಉಪ ವಿಭಾಗಾಧಿಕಾರಿ(ಪ್ರಭಾರ) ಪಿ.ಶ್ರೀನಿವಾಸ್, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಯೋಜನಾ ನಿರ್ದೇಶಕರಾದ ಶ್ರೀನಿವಾಸ್, ತಹಶೀಲ್ದಾರ್ ಮಹೇಶ್ ಇತರರು ಇದ್ದರು. 

      ಇನ್ನಷ್ಟು ಮಾಹಿತಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ನೀಡುವಲ್ಲಿ ಇನ್ನು ಮುಂದೆ ಮಹಿಳೆಯರ ಹೆಸರಿಗೆ ವಸತಿ ಕಲ್ಪಿಸಲಾಗುವುದು ಎಂದು ವಸತಿ ಸಚಿವರಾದ ಸೋಮಣ್ಣ ಅವರು ಪ್ರಕಟಿಸಿದ್ದಾರೆ. 

      ಜಿಲ್ಲೆಯಲ್ಲಿ ನಿರಾಶ್ರಿತರಿಗೆ ನಿರ್ಮಿಸಲಾದ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯದಂತೆ ಪ್ರತಿಯೊಬ್ಬರಿಗೂ ಸೂರು ನೀಡುವ ಭರವಸೆ ಕೊಡಗಿನಲ್ಲಿ ಈಡೇರಿದಂತಾಗಿದೆ ಎಂದರು..

Share and Enjoy !

Shares