ಧಾರವಾಡ : ಇಲ್ಲಿನ ಸತ್ತೂರಿನಲ್ಲಿರುವ ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಆವರಣಕ್ಕೆ ಇಂದು ಜಿಲ್ಲಾಧಿಕಾರಿಗಳಾದ ನಿತೇಶ್ ಕೆ.ಪಾಟೀಲ ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಮತ್ತಿತರ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು.
ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳಿಗೆ ಆಕ್ಸಿಜನ್ ಪೂರೈಸುವ ಘಟಕಗಳು ಮುಂದಿನ ಆದೇಶದವರೆಗೂ ವೈದ್ಯಕೀಯ ಸೇವೆಗಳಿಗೆ ಮಾತ್ರ ಆಕ್ಸಿಜನ್ ಪೂರೈಸಬೇಕು.ಪ್ರತಿದಿನ ನಮ್ಮ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಸರಬರಾಜಿನ ಖಚಿತ ಸಂಗ್ರಹ ಹೊಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಸಂಸ್ಥೆಯ ರವೀಂದ್ರ ಓದುಗೌಡ್ರ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಆಕ್ಸಿಜನ್ ಪೂರೈಸಲಾಗುವುದು ಎಂದರು.
ಹಿರಿಯ ಕೆ.ಎ.ಎಸ್.ಅಧಿಕಾರಿ ಮಹ್ಮದ್ ಜುಬೇರ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಅಪ್ಪಯ್ಯಸ್ವಾಮಿ ನಾಲತ್ವಾಡಮಠ,ಬಿ.ಶಂಕರಪ್ಪ, ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಡಾ.ಸಂತೋಷಕುಮಾರ ಬಿರಾದಾರ, ಸಹಾಯಕ ಔಷಧ ನಿಯಂತ್ರಕ ಕೆ.ಎಸ್.ಮಲ್ಲಿಕಾರ್ಜುನ ಮತ್ತಿತರರು ಇದ್ದರು.