ವಿಜಯನಗರವಾಣಿ ಸುದ್ದಿ
ಕಂಪ್ಲಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ’112’ ಯೋಜನೆಯಡಿ ನೀಡಿರುವ ಇಆರ್‌ಎಸ್ಎಸ್ ತುರ್ತು ಸೇವೆಯ ವಾಹನ ಸೇವೆಗೆ ಸಿಪಿಐ ಸುರೇಶ್ ಎಚ್.ತಳವಾರ್ ಭಾನುವಾರ ಚಾಲನೆ ನೀಡಿದರು.
ಸಿಪಿಐ ಸುರೇಶ್ ತಳವಾರ್ ಮಾತನಾಡಿ, ‘ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡಲು ಇಡೀ ದೇಶದಾದ್ಯಂತ ’112’ ಸಂಖ್ಯೆಯೊಂದನ್ನೇ ಬಳಸಲಾಗುತ್ತದೆ. ತುರ್ತು ಕರೆಗಳಾದ 100 (ಪೊಲೀಸ್), 101 (ಅಗ್ನಿಶಾಮಕ ಮತ್ತು ರಕ್ಷಣೆ) ಹಾಗೂ ಇತರೆ ತುರ್ತು ಕರೆ ಸಂಖ್ಯೆಗಳನ್ನು ’112’ರಲ್ಲಿ ಏಕೀಕೃತಗೊಳಿಸಿದ್ದು, ಈ ಸಂಖ್ಯೆಗೆ ಕರೆ ಮಾಡಿ ಸೇವೆ ಪಡೆಯಬಹುದು. ‘ಅಗ್ನಿ ಅನಾಹುತ, ವಿಪತ್ತು ಸಂದರ್ಭ, ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಜಗಳ, ಅಕ್ರಮ ಮದ್ಯ ಮಾರಾಟ, ಜೂಜಾಟ, ಡ್ರಗ್ಸ್ ಮಾರಾಟ, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಕ್ರಿಕೆಟ್ ಬೆಟ್ಟಿಂಗ್, ಹಿರಿಯ ನಾಗರಿಕರ ರಕ್ಷಣೆ ಮುಂತಾದ ಸಂದರ್ಭಗಳಲ್ಲಿ ಸಾರ್ವಜನಿಕರು ’112’ ಸಂಖ್ಯೆ ಕರೆ ಮಾಡಿದರೆ ತುರ್ತಾಗಿ ಸ್ಪಂದಿಸಿ ನೆರವಿಗೆ ಧಾವಿಸಲಾಗುತ್ತದೆ’ ಎಂದರು.
ಪಿಎಸ್ಐ ವಿರೂಪಾಕ್ಷಪ್ಪ ಮಾತನಾಡಿ, ತುರ್ತು ಸಮಯದಲ್ಲಿ ಸಾರ್ವಜನಿಕರ ಕರೆಯು ಮೊದಲಿಗೆ ಬೆಂಗಳೂರಿನಲ್ಲಿರುವ ತುರ್ತು ಪ್ರತಿಕ್ರಿಯ ಕೇಂದ್ರಕ್ಕೆ ತಲುಪಲಿದೆ. ಅಲ್ಲಿಂದ ನಮ್ಮ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ’112’ ಕಂಟ್ರೋಲ್ ರೂಂಗೆ ಬರಲಿದ್ದು, ಕೂಡಲೇ ಯಾವ ಭಾಗದಿಂದ ಕರೆ ಬಂದಿರುತ್ತದೆಯೋ ಎಂಬುದನ್ನು ತಿಳಿದು ಘಟನೆಗೆ ಸಂಬಂಧಿಸಿರುವ ಸ್ಥಳಕ್ಕೆ ಅತ್ಯಂತ ತುರ್ತಾಗಿ ಸ್ಪಂದನ ಸಹಾಯ ವ್ಯವಸ್ಥೆಯ ವಾಹನ ತೆರಳಿ ನೆರವಿಗೆ ಮುಂದಾಗಲಿವೆ’ ಎಂದು ವಿವರಿಸಿದರು.
ನಂತರ ಕ್ರೈಂ ಪಿಎಸ್ಐ ಬಸಪ್ಪ ಲಮಾಣಿ ಮಾತನಾಡಿ, ‘ತುರ್ತು ಸ್ಪಂದನಾ ವ್ಯವಸ್ಥೆಗಾಗಿ ಕಂಪ್ಲಿ ವಲಯಕ್ಕೆ ಒಂದು ಹೊಸ ಸ್ಕಾರ್ಪಿಯೋ ವಾಹನ ನೀಡಲಾಗಿದೆ. ಇನ್ನು ಮುಂದೆ ’112’ ಕರೆಗಳಿಗೆ ಸ್ಪಂದಿಸಿ ತುರ್ತು ಸೇವೆಗೆ ಸಿದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಎಸ್ಐ ತ್ಯಾಗರಾಜ, ಹಗರಪ್ಪ, ಸಿ.ಪರಶುರಾಮ, ಮಾರೇಶ್, ಡಿಆರ್ ಚಾಲಕರಾದ ಮಲ್ಲಿಕಾರ್ಜುನ, ಶರಣಬಸುವ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
02 ಕಂಪ್ಲಿ 01: ಕಂಪ್ಲಿಯಲ್ಲಿ ಇಆರ್‌ಎಸ್ಎಸ್ ತುರ್ತು ಸೇವೆಯ ವಾಹನ ಸೇವೆಗೆ ಸಿಪಿಐ ಸುರೇಶ್ ಎಚ್.ತಳವಾರ್ ಭಾನುವಾರ ಚಾಲನೆ ನೀಡಿದರು.ಇಆರ್‌ಎಸ್ಎಸ್ ತುರ್ತು ಸೇವೆಯ ವಾಹನ ಸೇವೆಗೆ ಸಿಪಿಐ ಸುರೇಶ್ ಎಚ್.ತಳವಾರ್ ಚಾಲನೆ