ವಿಜಯನಗರ ವಾಣಿ ಸುದ್ದಿ : ಬಳ್ಳಾರಿ
ಲಾಕ್‍ಡೌನ್ ಆದಾಗಿನಿಂದ ನಿತ್ಯ 600 ವಾಹನಗಳ ಸೀಜ್;320 ಪ್ರಕರಣ ದಾಖಲು
ಬಳ್ಳಾರಿ,ಮೇ 18 : ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸಂಪೂರ್ಣ ಜನಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದ್ದು,ಇದಕ್ಕೆ ಜನರು ಸಹಕರಿಸಬೇಕು;ಅನಗತ್ಯವಾಗಿ ಹೊರಗಡೆ ಜನರು ಕಂಡುಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿಸುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಎಚ್ಚರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಾಕ್ ಡೌನ್ ಆದಾಗಿನಿಂದ ಬಳ್ಳಾರಿ ಜಿಲ್ಲಾ ಪೊಲೀಸ್ ನಿತ್ಯ 600 ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ 320 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದ್ದು,ಇದರಲ್ಲಿ ಶೇ.70ರಷ್ಟು ಜನರನ್ನು ಜೈಲಿಗೆ ಕಳುಹಿಸಲಾಗಿದೆ ಎಂದರು.
ಜನರು ಅನಗತ್ಯವಾಗಿ ಹೊರಡಗಡೆ ಬರದೇ ಜಿಲ್ಲಾಡಳಿತದೊಂದಿಗೆ ಸಹಕರಿಸುವ ಮೂಲಕ ಕೋವಿಡ್ ಮಹಾಮಾರಿ ನಿಯಂತ್ರಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿರುವ ಎಸ್ಪಿ ಸೈದುಲು ಅಡಾವತ್ ಅವರು ನಿಯಮಗಳನ್ನು ಉಲ್ಲಂಘಿಸಿ ಹೊರಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.