ಕೋವಿಡ್ ಸೋಂಕು ನಿಯಂತ್ರಣಕ್ಕೆ ಕ್ರಮ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಟ್ರಲೈಸ್ಡ್ ಟ್ರಯೇಜ್ ಕೇಂದ್ರ

Share and Enjoy !

Shares

ವಿಜಯನಗರ ವಾಣಿ ಸುದ್ದಿ : ದಾವಣಗೆರೆ ಜಿಲ್ಲೆ

 

ದಾವಣಗೆರೆ :ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತ್ವರಿತ ರೋಗ ಪತ್ತೆ, ಸಂಪರ್ಕಿತರ ಪತ್ತೆ, ದಿಗ್ಬಂಧನ, ಕೋವಿಡ್ ಮಾರ್ಗಸೂಚಿ ಜಾರಿ ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಸೋಂಕಿತರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆ ಮಾಡುವ ಸಂಬಂಧ ಸರ್ಕಾರದ ನಿರ್ದೇಶನದಂತೆ ದಾವಣಗೆರೆ ಮಹಾನಗರಪಾಲಿಕೆಯ 45 ವಾರ್ಡ್‍ಗಳ ವ್ಯಾಪ್ತಿಯಲ್ಲಿ ವಿಕೇಂದ್ರೀಕೃತ ಚಿಕಿತ್ಸೆ ನಿರ್ಧರಣೆ ಕೇಂದ್ರ (ಡಿಸೆಂಟ್ರಲೈಸ್ಡ್ ಟ್ರಯೇಜ್ ಸೆಂಟರ್) ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಹಕಾರ ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.

        ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್ ಸೋಂಕಿತರ ಆರೋಗ್ಯ ಮೇಲ್ವಿಚಾರಣೆ ಮಾಡುವ ಸಂಬಂಧ ವೈದ್ಯರುಗಳ ನಿಯೋಜನೆ ಕುರಿತಂತೆ ಬುಧವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕೋವಿಡ್-19 ಸೋಂಕಿನ 2ನೇ ಅಲೆ ಹೆಚ್ಚಾಗಿ ಹರಡುತ್ತಿದ್ದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ತ್ವರಿತ ರೋಗ ಪತ್ತೆ, ಸಂಪರ್ಕಿತರ ಪತ್ತೆ, ದಿಗ್ಬಂಧನ, ಕೋವಿಡ್ ಮಾರ್ಗಸೂಚಿ ಜಾರಿ ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.  ಸರ್ಕಾರದ ಸೂಚನೆಯಂತೆ ಕೋವಿಡ್ ಸೋಂಕಿತರ ಆರೋಗ್ಯ ಸ್ಥಿತಿಯ ಮೇಲ್ಚಿಚಾರಣೆ ಮಾಡುವ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳ ಹಂತದಲ್ಲಿ ಡಿಸೆಂಟ್ರಲೈಸ್ಡ್ ಟ್ರಯೇಜ್ ಸೆಂಟರ್‍ಗಳನ್ನು ತೆರೆದು, ಭೌತಿಕವಾಗಿ ಚಿಕಿತ್ಸೆ ನಿರ್ಧರಣೆ ಕಾರ್ಯವನ್ನು ನಿರ್ವಹಿಸುವಂತೆ ಸರ್ಕಾರ ಆದೇಶ ನೀಡಿದೆ.  ಹೀಗಾಗಿ ಸೋಂಕಿತರ ಮೇಲ್ವಿಚಾರಣೆ ಮಾಡುವ ಸಂಬಂಧ ವಿಪತ್ತು ನಿರ್ವಹಣೆ ಕಾಯ್ದೆ 2005 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸರ್ಕಾರಿ ಹಾಗೂ ಖಾಸಗಿ ವೈದ್ಯರುಗಳನ್ನು ಮಹಾನಗರಪಾಲಿಕೆಯ ವಾರ್ಡ್‍ವಾರು ಪ್ರಕರಣಗಳ ಫಿಸಿಕಲ್ ಟ್ರಯೇಜ್ ಕಾರ್ಯ ನಿರ್ವಹಿಸಲು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.  ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 45 ವಾರ್ಡ್‍ಗಳಿವೆ.  ಪ್ರತಿ ಮೂರು ವಾರ್ಡ್‍ಗಳಿಗೆ ಒಂದು ಡಿಸೆಂಟ್ರಲೈಸ್ಡ್ ಟ್ರಯೇಜ್ ಸೆಂಟರ್ ನಂತೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 15 ಡಿಸೆಂಟ್ರಲೈಸ್ಡ್ ಟ್ರಯೇಜ್ ಸೆಂಟರ್ ತೆರೆಯಲಾಗುವುದು.   ನಿಯೋಜಿಸಿದ ವೈದ್ಯರು ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಸೋಂಕಿತರ ಫಿಸಿಕಲ್ ಟ್ರಯೇಜ್ ಕಾರ್ಯ ನಿರ್ವಹಿಸಬೇಕು.  ಪ್ರತಿ 10 ದಿನಗಳಿಗೆ ಖಾಸಗಿ ವೈದ್ಯರನ್ನು ಬದಲಿಸಲಾಗುವುದು.  ಸರ್ಕಾರಿ ವೈದ್ಯರ ಜೊತೆ ಖಾಸಗಿ ವೈದ್ಯರುಗಳು ನಿಗದಿತ ಡಿಸೆಂಟ್ರಲೈಸ್ಡ್ ಟ್ರಯೇಜ್ ಸೆಂಟರ್‍ಗೆ ಬೆಳಿಗ್ಗೆ 09 ಗಂಟೆಗೆ ಹಾಜರಾಗಬೇಕು.   ತಂಡದಲ್ಲಿ ಕೋವಿಡ್ ಸೋಂಕಿತರ ಪತ್ತೆ, ಸ್ವಾಬ್ ಸಂಗ್ರಹ, ಹೋಂ ಐಸೋಲೇಷನ್ ಮಾನಿಟರಿಂಗ್ ತಂಡಗಳು ಜೊತೆಗಿದ್ದು ಕಾರ್ಯ ನಿರ್ವಹಿಸಲಿವೆ.  ವೈದ್ಯರು ಸೋಂಕಿತರ ಆರೋಗ್ಯ ಪರಿಶೀಲಿಸಿ, ಸೋಂಕು ತೀವ್ರತೆ ಹಾಗೂ ಆರೋಗ್ಯ ಸ್ಥಿತಿಗತಿ ಆಧಾರದಲ್ಲಿ ಚಿಕಿತ್ಸೆಯ ಸ್ವರೂಪ, ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ ಚಿಕಿತ್ಸೆಯನ್ನು ನಿರ್ಧರಿಸಬೇಕು.  ಈ ರೀತಿ ನಗರ ವ್ಯಾಪ್ತಿಯಲ್ಲಿ ತಂಡಗಳು ಸತತ 10 ದಿನಗಳ ಕಾಲ ಉತ್ತಮ ಕಾರ್ಯ ನಿರ್ವಹಿಸಿದಲ್ಲಿ, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗು ತಡೆಗಟ್ಟಬಹುದು.  ಈ ದಿಸೆಯಲ್ಲಿ ಎಲ್ಲ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಕೋವಿಡ್ ನಿರ್ಮೂಲನೆಯಲ್ಲಿ ಜಿಲ್ಲಾಡಳಿತದ ಕೈಜೋಡಿಸಿ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮನವಿ ಮಾಡಿದರು.

     ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಜಿಲ್ಲೆಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸೋಮಶೇಖರ್, ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್,  ಸೇರಿದಂತೆ ವಿವಿಧ ಅಧಿಕಾರಿಗಳು, ನಗರದ ವಿವಿಧ ಆಸ್ಪತ್ರೆಗಳ ವೈದ್ಯರುಗಳು,  ವೈದ್ಯಕೀಯ ಕ್ಷೇತ್ರದ ವಿವಿಧ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share and Enjoy !

Shares