1 ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ ಬಿಎಸ್‍ವೈ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಬಳ್ಳಾರಿ

ಬಳ್ಳಾರಿ,ಮೇ 19 : ಜಿಲ್ಲೆಯ ಜಿಂದಾಲ್ ಬಳಿಯ ವಿಶಾಲ ಮೈದಾನದಲ್ಲಿ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಿದರು.

ಅತ್ಯಂತ ಸುಸಜ್ಜಿತ ಸಾವಿರ ಹಾಸಿಗೆಗಳ ಸೌಲಭ್ಯವುಳ್ಳ ಬೃಹತ್ ಆಮ್ಲಜನಕಯುಕ್ತ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ ಇದಾಗಿದೆ. ಸಕಲ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದ ವರ್ಚುವಲ್ ಮೂಲಕ ತಾತ್ಕಾಲಿಕ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್-19ರ ಎರಡನೇ ಅಲೆಯು ನಮ್ಮ ದೇಶವನ್ನು ಹಾಗೂ ನಮ್ಮ ರಾಜ್ಯವನ್ನು ಅತ್ಯಂತ ತೀವ್ರವಾಗಿ ಬಾಧಿಸುತ್ತಿದೆ. ಸರ್ಕಾರ ಸೋಂಕಿನ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಸರ್ಕಾರದ ಈ ಪ್ರಯತ್ನದಲ್ಲಿ ಜಿಂದಾಲ್ ಸಂಸ್ಥೆ ಸೇರಿದಂತೆ ಖಾಸಗಿ ಸಂಸ್ಥೆಗಳೂ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಎದುರಾಗಿದ್ದು, ಆಮ್ಲಜನಕದ ಕೊರತೆ. ಇಂತಹ ಸಂಕಟದ ಪರಿಸ್ಥಿತಿಯಲ್ಲಿ ಈ ಕೋವಿಡ್ ಕೇರ್ ಸೌಲಭ್ಯವು ಈ ಭಾಗದ ಸಂಜೀವಿನಿಯಾಗಲಿದೆ ಎಂಬ ಆಶಾಭಾವನೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಈ ಆಸ್ಪತ್ರೆಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ಜಿಂದಾಲ್ ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್‍ಲೈನ್ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲ ಸೌಕರ್ಯವನ್ನು ಕೇವಲ 15 ದಿನಗಳಲ್ಲಿ ನಿರ್ಮಿಸಿದ್ದು, ದಾಖಲೆಯೇ ಸರಿ ಎಂದರು.

ರೋಗಿಗಳಿಗೆ ನೇರ ಆಮ್ಲಜನಕ ಪೂರೈಸುವ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಜೆಎಸ್‍ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ. ವೈದ್ಯರು/ ತಜ್ಞರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ, ಮೇಲ್ವಿಚಾರಕರು ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ಹೊಂದಿದ್ದು, ಅವರು ವಿವಿಧ ಪಾಳಿಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ ಎಂದರು.

 

ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ:

ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೋವಿಡ್ ನಿಯಂತ್ರಣದೊಂದಿಗೆಯೇ, ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಕಳೆದ ವರ್ಷ ಮಾರ್ಚ್‍ಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್ ಗಳು, 444 ಐಸಿಯು ಗಳು ಹಾಗೂ 610 ವೆಂಟಿಲೇಟರ್ ಸಹಿತ ಐಸಿಯು ಗಳ ಸೌಲಭ್ಯವಿತ್ತು. ಈ ಎಲ್ಲ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಇಲಾಖೆಯ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳಲ್ಲಿ 24 ಸಾವಿರ ಆಕ್ಸಿಜನೇಟೆಡ್ ಬೆಡ್‍ಗಳು, 1145 ಐಸಿಯು ಬೆಡ್‍ಗಳು, 2059 ವೆಂಟಿಲೇಟರ್ ಬೆಡ್‍ಗಳು ಹಾಗೂ 1248 ಎಚ್‍ಎಚ್‍ಎಫ್‍ಎನ್‍ಸಿ ಸೌಲಭ್ಯಗಳು ಲಭ್ಯವಿದೆ ಎಂದರು.

ಅಂತೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳÀ ಸಂಖ್ಯೆಯನ್ನು ದ್ವಿಗುಣಗೊಳಿಸಿ, 4700 ರಿಂದ 9405 ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಬೆಡ್‍ಗಳÀ ಸಂಖ್ಯೆಯನ್ನು 341 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಎಚ್‍ಎಚ್‍ಎಫ್‍ಎನ್‍ಸಿಗಳ ಸಂಖ್ಯೆಯನ್ನು 15 ರಿಂದ 570ಕ್ಕೆ ಹೆಚ್ಚಿಸಲಾಗಿದೆ ಎಂದರು.

ಆಸ್ಪತ್ರೆಗಳ ಮೂಲಸೌಕರ್ಯ ಬಲಪಡಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ಹೆಚ್ಚುವರಿ ವೆಂಟೆಲೇಟರುಗಳು ಮತ್ತಿತರ ಸೌಲಭ್ಯಗಳು ನಿರಂತರವಾಗಿ ಸೇರ್ಪಡೆಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಸುಮಾರು 200 ವೆಂಟಿಲೇಟರುಗಳನ್ನು ನೀಡಿದ್ದೇವೆ ಎಂದರು.

 

ಆಕ್ಸಿಜನ್ ಬೆಡ್‍ಗಳು ಮತ್ತು ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಿಕೆ:

ಖಾಸಗಿ ವೈದ್ಯಕೀಯ ಕಾಲೇಜುಗಳು ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚಿಸಲು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುತ್ತಿದ್ದೇವೆ ಎಂದು ತಿಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂತಹ ಆಸ್ಪತ್ರೆಗಳಿಗೆ ಸರ್ಕಾರ ಶೇ.70ರ ಸಹಾಯ ಧನ ನೀಡಲಿದ್ದು, ಉಳಿದ ಶೇ. 30ರ ಮೊತ್ತವನ್ನು ಆಯಾ ಆಸ್ಪತ್ರೆಗಳು ಭರಿಸಬೇಕು ಎಂದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಸರಿದೂಗಿಸಲು ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರುಗಳ ಮೂಲಕ ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

 

ಆಮ್ಲಜನಕ ಹಂಚಿಕೆ 1015 ಮೆಟ್ರಿಕ್ ಟನ್‍ಗೆ ಹೆಚ್ಚಳ:

ಭಾರತ ಸರ್ಕಾರವು ರಾಜ್ಯಕ್ಕೆ ಆಮ್ಲಜನಕ ಹಂಚಿಕೆಯನ್ನು 965 ಮೆಟ್ರಿಕ್ ಟನ್ ನಿಂದ 1015 ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ. ಇದರಲ್ಲಿ 765 ಮೆಟ್ರಿಕ್ ಟನ್ ಆಮ್ಲಜನಕವು ರಾಜ್ಯದಲ್ಲಿಯೇ ದೊರೆಯುತ್ತಿದೆ. 60 ಟನ್ ಪಿಎಸ್‍ಎ ಪ್ಲಾಂಟ್‍ಗಳಿಂದ ಹಾಗೂ 160 ಟನ್ ಒಡಿಶಾ ಹಾಗೂ 30 ಟನ್ ವಿಶಾಖಪಟ್ಟಣದಿಂದ ದೊರೆಯುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿವರಿಸಿದರು.

ರಾಜ್ಯ ಸರ್ಕಾರವು ಕೋವಿಡ್ ಚಿಕಿತ್ಸೆ, ಲಸಿಕೆ ಹಾಗೂ ಸೋಂಕಿನ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿರುವುದನ್ನು ವಿವರಿಸಿದ ಸಿಎಂ ಬಿ.ಎಸ್.ವೈ ಅವರು ಕೇಂದ್ರ ಸರ್ಕಾರವೂ ಸಕಾಲದಲ್ಲಿ ನೆರವು ಒದಗಿಸಿ, ಬೆಂಬಲ ನೀಡುತ್ತಿದೆ ಎಂದರು.

ಖಾಸಗಿ ಕಂಪೆನಿಗಳು, ಸ್ವಯಂ ಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ನಾಗರಿಕ ಬಂಧುಗಳು ಕೋವಿಡ್ ನಿರ್ವಹಣೆಯಲ್ಲಿ ಕೈಜೋಡಿಸುತ್ತಿರುವುದು ಒಂದು ಮಾದರಿ ಬೆಳವಣಿಗೆಯಾಗಿದೆ ಎಂದು ಶ್ಲಾಘನೆಯನ್ನು ವ್ಯಕ್ತಪಡಿಸಿದ ಸಿಎಂ ಅವರು ಈ ಬೃಹತ್ ಆಸ್ಪತ್ರೆ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನರಿಗೆ ಸಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಈ ಆಸ್ಪತ್ರೆ ದೇಶಕ್ಕೇ ಮಾದರಿಯಾಗಲಿ ಎಂದು ಆಶಿಸಿದರು.

ಜಿಂದಾಲ್ ತಾತ್ಕಾಲಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಮಾತನಾಡಿ ರಾಜ್ಯದಲ್ಲಿಯೇ ಅತಿದೊಡ್ಡ ಸುಸಜ್ಜಿತ ಸೌಕರ್ಯಗಳುಳ್ಳ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಲಿಕ ಆಸ್ಪತ್ರೆ ಇದಾಗಿದೆ. ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರು ಈ ಕೊರೊನಾದಂತ ಸಂದಿಗ್ಧ ಸಮಯದಲ್ಲಿ ಜಿಲ್ಲೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

4.8ಕಿ.ಮೀ ದೂರದಿಂದ ಆಕ್ಸಿಜನ್ ಅನ್ನು ಪೈಪ್‍ಲೈನ್ ಮೂಲಕ ಈ ತಾತ್ಕಾಲಿಕ ಆಸ್ಪತ್ರೆಗೆ ತರಲಾಗಿದೆ; 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 15 ದಿನಗಳ ಕಾಲ ಜಿಂದಾಲ್ ಹಾಗೂ ಜಿಲ್ಲಾಡಳಿತದ ನಿರಂತರ ಪರಿಶ್ರಮದ ಫಲವಾಗಿ ಈ ಆಸ್ಪತ್ರೆ ತಲೆಎತ್ತಿದೆ ಎಂದರು.

ಕೊರೊನಾ ಸೊಂಕಿತರಾಗಿ ಚಿಕಿತ್ಸೆಗೆ ಈ ತಾತ್ಕಾಲಿಕ ಆಸ್ಪತ್ರೆಗೆ ಆಗಮಿಸುವವರು ಬೇಗ ಗುಣಮುಖರಾಗಿ ನಗುಮೊಗದಿಂದ ಮನೆಗೆ ತೆರಳಲಿ; ಆದಷ್ಟು ಬೇಗ ಕೊರೊನಾ ನಿಯಂತ್ರಣಕ್ಕೆ ಬರಲಿ ಎಂದರು.

ಜಿಲ್ಲೆ ಗೆದ್ದರೇ ದೇಶ ಗೆದ್ದಂತೆ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ;ಅವರ ನುಡಿಯನ್ನು ಅಕ್ಷರಷಃ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರು ಮಾತನಾಡಿ, ದೇಶ ಮೊದಲು ಎಂಬುದು ನಮ್ಮ ಜಿಂದಾಲ್‍ನ ಘೋಷವ್ಯಾಕ್ಯವಾಗಿದೆ. ಈ ನಿಟ್ಟಿನಲ್ಲಿ ಕೊರೊನಾದಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುವುದರ ಮೂಲಕ ಸರಕಾರದೊಂದಿಗೆ ಕೈಜೋಡಿಸಿದ್ದೇವೆ ಎಂದರು.

ಆಕ್ಸಿಜನ್ ಉತ್ಪಾದನಾ ಘಟಕಗಳ ಮೂಲಕ ನೇರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.ಕರ್ನಾಟಕದ ಜನತೆ ಅದರಲ್ಲೂ ವಿಶೇಷವಾಗಿ ಉತ್ತರಕರ್ನಾಟಕದ ಗ್ರಾಮೀಣ ಪ್ರದೇಶದ ಜನರಿಗೆ ಇದನ್ನು ಅರ್ಪಿಸುತ್ತೇನೆ; ಇದರ ಪ್ರಯೋಜನ ಪಡೆದುಕೊಂಡು ಆದಷ್ಟು ಬೇಗ ಗುಣಮುಖರಾಗಿ ಎಂದು ಹಾರೈಸುತ್ತೇನೆ ಎಂದರು.

ಸಂಡೂರು ಶಾಸಕ ತುಕಾರಾಂ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್, ಜಿಂದಾಲ್‍ನ ವಿನೋದ ನೋವೆಲ್, ಮಂಜುನಾಥ ಪ್ರಭು ಮತ್ತಿತರರು ಇದ್ದರು.

Share and Enjoy !

Shares