ಬಳ್ಳಾರಿ :ರೆಮಿಡಿಸಿವರ್ ಸೇರಿ ಅಗತ್ಯ ಔಷಧಿಗಳನ್ನು ತಕ್ಷಣ ಖರೀದಿಸಿ: ಸಚಿವ ಆನಂದಸಿಂಗ್

Share and Enjoy !

Shares

ಟ್ರಾಮಾಕೇರ್ ಕೋವಿಡ್ ಆಸ್ಪತ್ರೆಯಲ್ಲಿ ಸಭೆ *ಲಾಕ್‍ಡೌನ್ ವಿಸ್ತರಣೆಗೆ ಸಮ್ಮತಿ ವ್ಯಕ್ತಪಡಿಸಿದ ಸಚಿವ ಸಿಂಗ್

 

ಬಳ್ಳಾರಿ,ಮೇ 21: ಜಿಲ್ಲೆಯಲ್ಲಿನ ಕೋವಿಡ್ ಸೊಂಕಿತರಿಗೆ ಯಾವುದೇ ರೀತಿಯ ಔಷಧಿಗಳು ಕೊರತೆಯಾಗದಂತೆ ನೋಡಿಕೊಳ್ಳಿ ಮತ್ತು ರೆಮಿಡಿಸಿವರ್ ಸೇರಿದಂತೆ ಅಗತ್ಯ ಔಷಧಿಗಳನ್ನು ತಕ್ಷಣ ಖರೀದಿಸಿ ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಟ್ರಾಮಾಕೇರ್ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ತಿಂಗಳಿಗಾಗುವಷ್ಟು ಔಷಧಿಗಳನ್ನು ಒಂದೇ ಬಾರಿಗೆ ಖರೀದಿಸಿ ಮತ್ತು ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ; ಜಿಲ್ಲಾಧಿಕಾರಿಗಳಿಗೆ ತಕ್ಷಣ ಅವಶ್ಯಕತೆ ಇರುವ ಡ್ರಗ್ಸ್‍ಗಳ ವಿವರಗಳನ್ನು ನೀಡಿ ಅವರು ತಕ್ಷಣ ಖರೀದಿಸಿ ವಿತರಿಸಲಿದ್ದಾರೆ ಎಂದರು.

ಬಳ್ಳಾರಿಯ ವಿಮ್ಸ್ ಬಳಿಯ ನ್ಯೂ ಡೆಂಟಲ್ ಕಾಲೇಜಿನಲ್ಲಿ 140 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, 6 ಕೆಎಲ್ ಆಕ್ಸಿಜನ್ ಟ್ಯಾಂಕ್ ಕೂಡ ಅಳವಡಿಸಲಾಗಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಕಾರ್ಯಾರಂಭವಾಗಲಿದೆ. ಇದರಿಂದ ಟ್ರಯಾಜ್‍ನಲ್ಲಿ ಅನೇಕ ದಿನಗಳಿಂದ ಐಸಿಯು ಬೆಡ್ ಅಗತ್ಯ ಇರುವವರಿಗೆ ಇದು ಸಹಕಾರಿಯಾಗಲಿದ ಎಂದರು.

ಮೂರನೇ ಅಲೆ ಬರುತ್ತದೆಯೋ ಇಲ್ಲವೋ ಅದು ನಂತರದ ಪ್ರಶ್ನೆ;ಯಾವುದೇ ರೀತಿಯ ಸವಾಲು ಬಂದರೂ ಎದುರಿಸುವ ನಿಟ್ಟಿನಲ್ಲಿ ತಪಾಸಣಾ ಲ್ಯಾಬ್ ಪ್ರಮಾಣಗಳ ಹೆಚ್ಚಳ, ಆಕ್ಸಿಜನ್ ಬೆಡ್‍ಗಳು ಹಾಗೂ ವೆಂಟಿಲೇಟರ್‍ಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಿ;ಅದಕ್ಕೆ ಬೇಕಾದ ಎಲ್ಲ ರೀತಿಯ ಅನುದಾನವನ್ನು ಒದಗಿಸಲಾಗುವುದು ಎಂದರು.

ಟ್ರಯಾಜ್‍ನಲ್ಲಿ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುವಂತೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿಂಗ್ ಅವರು ತೋರಣಗಲ್ಲುವಿನಲ್ಲಿರುವ ಸಂಜೀವಿನಿ ಆಸ್ಪತ್ರೆಯಲ್ಲಿ ಇನ್ನೂ ಕೆಲ ವೆಂಟಿಲೇಟರ್‍ಗಳನ್ನು ಅಳವಡಿಸಲಾಗುತ್ತಿದೆ. ನಮಗೆ 25 ವೆಂಟಿಲೇಟರ್‍ಗಳು ಬಂದಿದ್ದು,ಅವುಗಳನ್ನು ಅಳವಡಿಸಲಾಗುವುದು ಹಾಗೂ ಜಿಲ್ಲಾಸ್ಪತ್ರೆಗೆ ಮಂಗಳೂರಿನಿಂದ ದಾನಿಗಳು ಅಗತ್ಯ ಬೆಡ್ ಹಾಗೂ 8 ವೆಂಟಿಲೇಟರ್ ನೀಡಲು ಮುಂದೆ ಬಂದಿದ್ದಾರೆ;ಇವುಗಳಿಂದ ನಮ್ಮ ಸಮಸ್ಯೆ ಕಡಿಮೆಯಾಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.

*ಟ್ರಾಮಾಕೇರ್ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಇನ್ಮುಂದೆ ಗಂಭೀರ ಪ್ರಕರಣಗಳು ಮಾತ್ರ ದಾಖಲು: ಜಿಲ್ಲೆಯ ವಿವಿಧೆಡೆ ಆಕ್ಸಿಜನ್ ಬೆಡ್ ಮೇಲಿರುವ ಗಂಭಿರ ಪ್ರಕರಣಗಳನ್ನು ಟ್ರಾಮಾಕೇರ್ ಹಾಗೂ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದರು.

ಹೊಸ ಸೊಂಕಿತರ ಆಕ್ಸಿಜನ್ ಬೆಡ್ ಅವಶ್ಯಕತೆ ಇರುವ ಪ್ರಕರಣಗಳನ್ನು ನ್ಯೂ ಡೆಂಟಲ್ ಕಾಲೇಜಿನಲ್ಲಿ ಸ್ಥಾಪಿಸಲಾಗುತ್ತಿರುವ 140 ಆಕ್ಸಿಜನ್ ಬೆಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುವುದು ಎಂದರು.

ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ತಕ್ಷಣ ಪ್ರಕಟಣೆ ನೀಡಿ ನೇಮಕ ಮಾಡಿಕೊಳ್ಳಿ ಎಂದು ವಿಮ್ಸ್ ನಿರ್ದೇಶಕರಿಗೆ ಡಿಸಿ ಮಾಲಪಾಟಿ ಅವರು ಸೂಚಿಸಿದರು.

*ಲಾಕ್‍ಡೌನ್ ವಿಸ್ತರಣೆಗೆ ಸಚಿವ ಸಿಂಗ್ ಸಮ್ಮತಿ: ಕೊರೊನಾ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇನ್ನೂ ಕೆಲದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಿದರೇ ಒಳ್ಳೆಯದು ಎಂಬ ಭಾವನೆಯನ್ನು ಸಚಿವ ಆನಂದಸಿಂಗ್ ಅವರು ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಲಾಕ್‍ಡೌನ್ ವಿಸ್ತರಣೆ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ; ನನ್ನ ಅಭಿಪ್ರಾಯವೂ ಅದೇ ಆಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಿರುವುದರಿಂದ ಸೊಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ತಿಳಿಸಿದರು.

ಜನರು ಆಮ್ಲಜನಕದ ಪ್ರಮಾಣ(ಸ್ಯಾಚುರೇಶನ್) ಕಡಿಮೆಯಾದ ನಂತರ ಭಯಗೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ;ಅಲ್ಲಿವರೆಗೆ ಇದರ ಕುರಿತು ನಿರ್ಲಕ್ಷ್ಯ ವಹಿಸುತ್ತಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಜನರು ಲಕ್ಷಣ ಕಂಡುಬಂದರೇ ತಕ್ಷಣ ತಪಾಸಣೆ ಮಾಡಿಸಿಕೊಂಡು ಅದರನುಸಾರ ಚಿಕಿತ್ಸೆಗೆ ಒಳಪಡಬೇಕು ಎಂದರು.

ಸಂಡೂರು ಶಾಸಕ ಈ.ತುಕಾರಾಂ ಮಾತನಾಡಿದರು.

ಈ ಸಂದರ್ಭದಲ್ಲಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ,ಡಿಎಚ್‍ಒ ಡಾ.ಜನಾರ್ಧನ್,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಟ್ರಾಮಾಕೇರ್ ನೋಡಲ್ ಅಧಿಕಾರಿ ಶ್ರೀನಿವಾಸಲು, ಡಾ.ಇಂದ್ರಾಣಿ, ಡಾ.ಕಿರಣಕುಮಾರ್ ಮತ್ತಿತರರು ಇದ್ದರು.

Share and Enjoy !

Shares