ವಿಜಯನಗರವಾಣಿ ಸುದ್ದಿ
ಕಂಪ್ಲಿ: ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಆದರೆ, ಕೊರೋನಾ ನಿಯಮ ಉಲ್ಲಂಘಿಸಿ ಕಂಪ್ಲಿಯ ಗೋಲ್ಡಾನ್ ಪಿಕಾಕ್ ವೈನ್ ಶಾಪ್ ತೆರೆದಿರುವುದು ಮಂಗಳವಾರ ಕಂಡು ಬಂತು.
ಹೆಮ್ಮಾರಿ ಕೊರೋನಾ ವೈರಸ್ ನಿಂದಾಗಿ ಸಾಕಷ್ಟು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಕೋರೊನಾ ಕಡಿವಾಣಕ್ಕಾಗಿ ರಾಜ್ಯದಲ್ಲಿ ಎರಡನೇ ಹಂತದ ಲಾಕ್ಡೌನ್ ಜಾರಿ ಮಾಡಲಾಗಿದೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ವೇಗವು ಕಡಿತವಾಗದ ಪರಿಣಾಮ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ಒಂದು ವಾರದಲ್ಲಿ ಎರಡು ದಿನ ಅಂದರೆ ಸೋಮವಾರ ಮತ್ತು ಮಂಗಳವಾರ(ಬೆಳಿಗ್ಗೆ 6 ಗಂಟೆಯಿಂದ 12ವರೆಗೆ) ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ನಂತರದ ಐದು ದಿನಗಳವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಯಾಗಿದೆ. ಆದರೆ, ಕಂಪ್ಲಿಯ ಕೊಟ್ಟಾಲ್ ರಸ್ತೆಯ ಎಪಿಎಂಸಿ ಎದುರುಗಡೆ ಇರುವ ಗೋಲ್ಡನ್ ಪಿಕಾಕ್ ಮದ್ಯದಂಗಡಿಯವರು ಸರ್ಕಾರ ಹಾಗೂ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ 12ಗಂಟೆಯ ನಂತರ ತೆರೆದಿರುವ ಜತೆಗೆ ಮದ್ಯಪ್ರಿಯರನ್ನು ಒಳಗಡೆ ಕರೆಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದಾರೆ.
ಇಲ್ಲಿನ ಮದ್ಯದಂಗಡಿ ಮುಂದೆ ಮದ್ಯಪ್ರಿಯರು ಮುಗಿಬಿದ್ದಿದ್ದರು. ಇಲ್ಲಿನ ಮದ್ಯಪ್ರಿಯರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಮರೆ ಮಾಚಿತ್ತು. ಇಲ್ಲೇನು ಕೊರೋನಾ ಇಲ್ಲವೇ ಎಂಬುವಷ್ಟರ ಮಟ್ಟಿಗೆ ಕುಡುಕರು ಜಮಾಯಿಸಿರುವುದು ಗೋಚರವಾಯಿತು. ಇನ್ನೂ ಐದು ದಿನ ಮದ್ಯದಂಗಡಿ ಮುಚ್ಚುವ ಪರಿಣಾಮ ಮದ್ಯಪ್ರಿಯರು ಅಂಗಡಿಗೆ ಮೂಗಿಬಿದ್ದು ಮದ್ಯದ ಬಾಕ್ಸ್ಗಳನ್ನು ಹಾಗೂ ಚೀಲಗಳಲ್ಲಿ ಮದ್ಯದಂಗಡಿಗಳನ್ನು ತುಂಬಿಕೊಂಡು ಹೋಗುತ್ತಿರುವುದು ಕಂಡು ಬಂತು. ಇದರಿಂದ ಅಕ್ರಮ ಮದ್ಯದಂಗಡಿ ಹಾಗೂ ಡಬ್ಬಿಗಳಲ್ಲಿ ಸಿಗುವಂತಾಗಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಮುಂದೆ ಮದ್ಯನೇ ಸಿಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಜನರು ಮದ್ಯ ಕೊಳ್ಳಲು ನಿಂತಿದ್ದರು. ನಂತರ ಪೊಲೀಸ್ ಅಧಿಕಾರಿಗಳು ಗೋಲ್ಡನ್ ಪಿಕಾಕ್ ಶಾಪ್ ಅಂಗಡಿಗೆ ಬರುತ್ತಿದ್ದಂತೆ ಮದ್ಯಪ್ರಿಯರು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೂ ಸಹ ಕೆಲವರು ಮದ್ಯದಂಗಡಿಯಲ್ಲಿ ಅವಿತುಗೊಂಡಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ, ಗೋಲ್ಡನ್ ಪಿಕಾಕ್ ಮದ್ಯದಂಗಡಿಯನ್ನು ತೆರೆಸಿದಾಗ ಮದ್ಯಪ್ರಿಯರು ಒಳಗಡೆ ಸೇರಿದ್ದರು. ನಂತರ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಕೊರೋನಾ ಎರಡನೇ ಅಲೆಯಲ್ಲಿ ಜೀವ ಉಳಿಸಿಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ, ನಿಯಮ ಗಾಳಿಗೆ ತೂರಿ ಮದ್ಯದಂಗಡಿ ತೆರೆದಿರುವುದು ಯಾವ ನ್ಯಾಯ. ಇಂತಹವರಿಗೆ ಸಂಬಂಧಪಟ್ಟ ಅಧಿಕಾರಿಗಳ ಭಯ ಇಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೊರೋನಾ ನಿಯಮ ಉಲ್ಲಂಘಿಸಿ ಮದ್ಯದಂಗಡಿ ತೆರೆದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗಿದೆ. ಸರ್ಕಾರದ ನಿಯಮ ಗಾಳಿಗೆ ತೂರಿದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.