ಧಾರವಾಡ : ಕಳೆದ ವರ್ಷ ಉತ್ತಮ ಮಳೆಯಾಗಿದ್ದು, ರಾಜ್ಯದಲ್ಲಿ 153 ಲಕ್ಷ ಟನ್ ಆಹಾರ ಉತ್ಪಾದೆಯಾಗಿದೆ. ಪ್ರಸಕ್ತ ವರ್ಷವು ಉತ್ತಮ ಮಳೆಯಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಿತ್ತನೆ ಬೀಜ, ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದೆ. ಯಾವುದೇ ಮಾರಾಟಗಾರರು ಬಿತ್ತನೆ ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಠಿಸಿದರೆ ಹಾಗೂ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಿ ತಕ್ಷಣ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಅವರು ಇಂದು ಸಂಜೆ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಾಗೃತಿ ಕೋಶದ ಕ್ರಮ: ಕೃಷಿ ಇಲಾಖೆಯ ಜಾಗೃತಿ ಕೋಶದಿಂದ 2020-21ನೇ ಸಾಲಿನಲ್ಲಿ 16.20 ಕೋಟಿ ರೂ. ಮೊತ್ತದ ಹಾಗೂ 2021-22ರಲ್ಲಿ 1.06 ಕೋಟಿ ರೂ. ಮೊತ್ತದ ನಕಲಿ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ವಶಪಡಿಸಿಕೊಂಡು 2020-21ನೇ ಸಾಲಿನಲ್ಲಿ 55 ಹಾಗೂ 2021-22ರಲ್ಲಿ 13 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಕಲಿ ಜೈವಿಕ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ, ಅಂಗಡಿಗಳ ವಿರುದ್ಧ 2019-20ರಲ್ಲಿ 69 ಮೊಕೊದ್ದಮೆಗಳನ್ನು ಹಾಗೂ 2020-21ರಲ್ಲಿ 7 ಮೊಕೊದ್ದಮೆಗಳನ್ನು ಈಗಾಗಲೇ ಹೂಡಲಾಗಿದೆ. ಕಳೆದ ಸಾಲಿನಲ್ಲಿ ರಾಜ್ಯದಾದ್ಯಂತ 266 ಮಾರಾಟಗಾರರ ಪರವಾನಿಗೆಯನ್ನು ರದ್ದು ಪಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈಗಾಗಲೇ 15 ಅಂಗಡಿಗಳ ಲೈಸನ್ಸ್ ರದ್ಧುಪಡಿಸಲಾಗಿದೆ ಎಂದು ಅವರು ತಿಳಿಸಿದ್ದರು.
ವಾಡಿಕೆಗಿಂತ ಹೆಚ್ಚು ಮಳೆ: ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಶೇ.99 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ 15,428 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಈಗಾಗಲೇ 20,268 ಕ್ವಿಂಟಲ್ ಬೀಜಗಳ ಲಭ್ಯತೆ ಇದ್ದು ಮತ್ತು 16781 ಕ್ವಿಂಟಲ್ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ 2.35 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಇದ್ದು, ಈಗಾಗಲೇ 0.32909 ಹೆಕ್ಟೇರ್ ಭೂಮಿಯು ಬಿತ್ತನೆಯಾಗಿದೆ.
ರಸಗೊಬ್ಬರ ದಾಸ್ತಾನು: ರಾಜ್ಯದಲ್ಲಿ ಅಗತ್ಯವಿರುವಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಇದೆ. ಧಾರವಾಡ ಜಿಲ್ಲೆಯಲ್ಲಿ ಯೂರಿಯಾ 12714 ಟನ್ ದಾಸ್ತಾನು ಇದ್ದು, 7704 ಟನ್ ಈಗಾಲೇ ಮಾರಾಟವಾಗಿ, 5010 ಟನ್ ಉಳಿಕೆ ದಾಸ್ತಾನು ಇದೆ. ಡಿಎಪಿ 12286 ಟನ್ ದಾಸ್ತಾನು ಇದ್ದು, 7954 ಟನ್ ಈಗಾಲೇ ಮಾರಾಟವಾಗಿ, 4332 ಟನ್ ಉಳಿಕೆ ದಾಸ್ತಾನು ಇದೆ. ಪೊಟಾಷ್ 3878 ಟನ್ ದಾಸ್ತಾನು ಇದ್ದು, 886 ಟನ್ ಈಗಾಲೇ ಮಾರಾಟವಾಗಿ, 2992 ಟನ್ ಉಳಿಕೆ ದಾಸ್ತಾನು ಇದೆ. ಕಾಂಪ್ಲೆಕ್ಸ್ 14258 ಟನ್ ದಾಸ್ತಾನು ಇದ್ದು, 5879 ಟನ್ ಈಗಾಲೇ ಮಾರಾಟವಾಗಿ, 8379 ಟನ್ ಉಳಿಕೆ ದಾಸ್ತಾನು ಇದೆ. ಒಟ್ಟು ವಿವಿಧ ರಸಗೊಬ್ಬರಗಳು ಇಲ್ಲಿಯವರೆಗೆ 22423 ಟನ್ ಮಾರಾಟವಾಗಿದ್ದು ಮತ್ತು 2713 ಟನ್ ಉಳಿಕೆ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆಯ ಗುಣ ನಿಯಂತ್ರಣ ವಿಭಾಗ: ಕೃಷಿ ಇಲಾಖೆಯ ಗುಣ ನಿಯಂತ್ರಣ ವಿಭಾಗದಿಂದ ರಾಜ್ಯದಲ್ಲಿ 3298 ಬೀಜ ಮಳಿಗೆ, 4539 ರಸಗೊಬ್ಬರ ಮಳಿಗೆ ಮತ್ತು 3277 ಪೀಡನಾಶಕ ಮಳಿಗೆಗಳಿಗೆ ಅಧಿಕಾರಿಗಳು ಭೇಟಿ ನೀಡಿ, ತಪಾಸಣೆ ಮಾಡಿದ್ದಾರೆ. ಮತ್ತು 296 ಬೀಜ ಮಳಿಗೆಗಳಿಗೆ, 779 ರಸಗೊಬ್ಬರ ಮಳಿಗೆಗಳಿಗೆ ಹಾಗೂ 333 ಪೀಡನಾಶಕ ಮಳಿಗೆಗಳಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಮತ್ತು ಬೀಜ ಮಳಿಗೆ 3 ರಸಗೊಬ್ಬರ ಮಳಿಗೆ 2 ಪೀಡನಾಶಕ ಮಳಿಗೆಗಳನ್ನು ಜಪ್ತಿ ಮಾಡಿದ್ದಾರೆ.
ಅದೆ ರೀತಿ ದಾರವಾಡ ಜಿಲ್ಲೆಯ 72 ಬೀಜ ಮಳಿಗೆ, 54 ರಸಗೊಬ್ಬರ ಮಳಿಗೆ ಮತ್ತ 41 ಪೀಡನಾಶಕ ಮಳಿಗೆಗಳನ್ನು ಅಧಿಕಾರಿಗಳು ತಪಾಸಣೆ ಮಾಡಿ, ಒಂದು ಬೀಜ ಮಳಿಗೆ, ಆರು ರಸಗೊಬ್ಬರ ಮಳಿಗೆಗಳಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಮತ್ತು ಒಂದು ಬೀಜ ಮಳಿಗೆ ಮತ್ತು ಒಂದು ರಸಗೊಬ್ಬರಳ ಮಳಿಗೆಯನ್ನು ಜಪ್ತಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನಲ್ಲಿ ಮಣ್ಣು ಸುಧಾರಕವನ್ನು ಸಾವಯವ ಡಿ.ಎ.ಪಿ ಹಾಗೂ ಗೊಬ್ಬರವೆಂದು ಹೇಳಿ ಮಿನಿ ಟ್ರಕ್‍ನಲ್ಲಿ ಮಾರಾಟ ಮಾಡುತ್ತಿರುವವರನ್ನು ತಡೆದು 56 ಚೀಲ ಅಂದಾಜು ರೂ.75,000 ಮೌಲ್ಯದ ಗೊಬ್ಬರವನ್ನು ಜಪ್ತಿ ಮಾಡಿ ಆರೋಪಿತರನ್ನು ಎಪ್.ಆಯ್.ಆರ್ ದಾಖಲಿಸಿ 10 ದಿನಗಳ ಕಾಲ(ಸಿ.ಆರ್.ಪಿ.ಸಿ 420 ರಡಿ) ಕಾರಾಗೃಹದಲ್ಲಿ ಇಡಲಾಗಿತ್ತು. ಮತ್ತು ಧಾರವಾಡ ಶಹರದ ಸಾಧನಕೇರಿಯಲ್ಲಿ ಎ.ಎಸ್ ಗ್ರೂಪ್ ಸಂಸ್ಥೆಯಿಂದ ಮಣ್ಣು ಸುಧಾರಕವನ್ನು ಜೈವಿಕ ಡಿ.ಎ.ಪಿ., ಯೂರಿಯಾ ಗೊಬ್ಬರ ಎಂದು ಮಾರಾಟ ಮಾಡುತ್ತಿದ್ದ ದಾಖಲಾತಿಗಳನ್ನು ಪರಿಶೀಲಿಸಿ ಸಂಸ್ಥೆಯ ಮೇಲೆ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.
ಕೃಷಿ ಬದು, ಹೊಂಡ ನಿರ್ಮಾಣ: ಪ್ರಧಾನ ಮಂತ್ರಿಗಳ ಘೋಷಣೆ ‘ಕ್ಯಾಚ್ ದ ರೆನ್ ವೇರ್ ಇಟ್ ಫಾಲ್ಸ್’ (ಅಚಿಣh ಣhe ಡಿಚಿiಟಿ ತಿheಡಿe iಣ ಜಿಚಿಟಟs) ಅಡಿಯಲ್ಲಿ ಕಳೆದ ವರ್ಷ ರಾಜ್ಯದಲ್ಲಿ ಉದ್ಯೋಗ ಖಾತ್ರಿಯೋಜನೆಯಲ್ಲಿ 1 ಕೋಟಿ 17 ಲಕ್ಷ ಮಾನವ ದಿನಗಳನ್ನು ಸೃಜಿಸಿ, ರೂ.335 ಕೋಟಿ ವೆಚ್ಚ ಭರಿಸಿ, 60,500 ಹೆಕ್ಟೇರ್ ಬದು ನಿರ್ಮಾಣ ಹಾಗೂ 15,504 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಮತ್ತು ಧಾರವಾಡ ಜಿಲ್ಲೆಯಲ್ಲಿ 281 ಹೆಕ್ಟೆರ ಭೂಮಿಯಲ್ಲಿ ಬದು ನಿರ್ಮಾಣ ಹಾಗೂ 48 ಹೆಕ್ಟೇರ್‍ದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಿಸಾನ್ ಯೋಜನೆ ಪರಿಹಾರ: ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ ಯೋಜನೆಯಡಿ ಡಿಸೆಂಬರ್-2019 ರಿಂದ ಮೇ-2021ರವರೆಗೆ ಧಾರವಾಡ ಜಿಲ್ಲೆಯ 1.21 ಲಕ್ಷ ರೈತರಿಗೆ ರೂ. 164.89 ಕೋಟಿ ಪರಿಹಾರವನ್ನು ಮತ್ತು ರಾಜ್ಯ ಸರ್ಕಾರದ ಸಿ.ಎಂ. ಕಿಸಾನ್ ಯೋಜನೆಯಡಿ ಆಗಸ್ಟ್ -2019 ರಿಂದ ಮಾರ್ಚ್-2021ರವರೆಗೆ ಧಾರವಾಡ ಜಿಲ್ಲೆಯ 1.15 ಲಕ್ಷ ರೈತರಿಗೆ ರೂ. 69.90 ಕೋಟಿ ಪರಿಹಾರವನ್ನು ಜಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಲಾಕ್‍ಡೌನ್ ಅವಧಿಯಲ್ಲಿಯೂ ಕೃಷಿಗೆ ಯಾವುದೆ ತೊಂದರೆಯಾಗದಂತೆ ಕ್ರಮವಹಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಧಾರವಾಡ ಜಿಲ್ಲಾಧಿಕಾರಿಗಳು ಕೃಷಿ ಪರಿಕರಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಿದ್ದು, ಎಲ್ಲ ಖಾಸಗಿ ಮಾರಾಟಗಾರರಿಗೆ ಕಡ್ಡಾಯವಾಗಿ ಈ ಅವಧಿಯಲ್ಲಿ ಮಾರಾಟ ಮಳಿಗೆ ತೆರೆದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲು ಕ್ರಮವಹಿಸಬೇಕು. ನಿಯಮ ಪಾಲಿಸದಿದ್ದಲ್ಲಿ ಅಂತಹ ಮಳಿಗೆಗಳಿಗೆ ಶೋಕಾಸ್ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ ಎಂದು ರೈತರು ಆತಂಕ ಪಟ್ಟು ಪ್ರತಿ ದಿನ ಖರೀದಿಗೆ ಮುಗಿಬೀಳುತ್ತಿದ್ದಾರೆ. ಅಧಿಕಾರಿಗಳು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಮೇಲೆ ನಿಗಾವಹಿಸಿ, ಎಲ್ಲಾ ಸಹಕಾರಿ ಸಂಘಗಳಿಗೆ ಗೊಬ್ಬರ ವಿತರಣೆಯಾಗುವಂತೆ ಕ್ರಮವಹಿಸಬೇಕೆಂದು ತಿಳಿಸಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ರೈತರಲ್ಲಿ ಗೊಬ್ಬರದ ಬ್ರ್ಯಾಂಡ್‍ಗಳ ಬಗ್ಗೆ ಗೊಂದಲವಿದೆ. ಯಾವ ಗೊಬ್ಬರ ಚಿಲದಲ್ಲಿ ಯಾವ ಯಾವ ಗೊಬ್ಬರದ ಮಿಶ್ರಣವಿದೆ ಎಂಬುದರ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯ ಕೆಲವು ಭಾಗದಲ್ಲಿ ಹೆಸರು ಬಿತ್ತನೆ ಬೀಜಕ್ಕೆ ಹೆಚ್ಚು ಬೇಡಿಕೆ ಇದ್ದು, ರೈತರ ಬೇಡಿಕೆಗೆ ತಕ್ಕಂತೆ ಪೂರೈಸಬೇಕು. ಬೆಳೆ ಪರಿಹಾರದಲ್ಲಿ ಪೆರಲ್ ಮತ್ತು ಮಾವು ಸೆರ್ಪಡೆ ಮಾಡಿ, ಹೊಸ ಆದೇಶ ಹೊರಡಿಸಬೇಕೆಂದು ಸಚಿವರಿಗೆ ವಿನಂತಿಸಿದರು.
ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಕಾಪು ದಾಸ್ತಾನು ಇರುವ ರಸಗೊಬ್ಬರವನ್ನು ಖರೀದಿಸಲು ರೈತರು ಹಿಂಜರಿಯುತ್ತಿದ್ದಾರೆ. ಈ ಕುರಿತು ರೈತರಿಗೆ ತಿಳುವಳಿಕೆ ನೀಡಿ, ಸಂಶಯಗಳನ್ನು ನೀವಾರಿಸಬೇಕು. ಮತ್ತು ಕೆಲವು ಸಹಕಾರಿ ಸಂಘಗಳಲ್ಲಿ ಕೆಎಸ್‍ಸಿಎಂಎಫ್ ತಪ್ಪಿನಿಂದಾಗಿ ರೈತರಿಗೆ ಹೆಚ್ಚುವರಿ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದು, ರೈತರು ದೂರು ಸಲ್ಲಿಸಿದ್ದಾರೆ. ಅಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕೆಂದು ಹೇಳಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಖಾಸಗಿ ವಿತರಕರು ಮಾರಾಟ ಮಾಡುವ ಬೀಜದ ದರ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ನೀಡುವ ದರ ವ್ಯತ್ಯಾಸವಿದ್ದು, ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಬೀಜಗಳಿಗಿಂತ ಆರ್‍ಎಸ್‍ಕೆಯಲ್ಲಿ ಸಿಗುವ ಬೀಜಗಳು ಪ್ರಮಾಣಿಕೃತವಾಗಿದ್ದು, ಹೆಚ್ಚು ಉತ್ಪನ್ನ ಮತ್ತು ಲಾಭ ಬರುತ್ತದೆ ಎಂದು ರೈತರಿಗೆ ಜಾಗೃತಿ ಮೂಡಿಸಬೇಕು. ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಸಮಸ್ಯೆ ಪರಿಹರಿಸಬೇಕೆಂದು ಅವರು ಹೇಳಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೋರತೆ ಇಲ್ಲ. ಪ್ರತಿ ತಾಲೂಕಿನಲ್ಲಿ ಪ್ರತಿ ದಿನ ಲಭ್ಯವಿರುವ ಬಿತ್ತನೆ ಬೀಜ, ರಸಗೊಬ್ಬರದ ಮಾಹಿತಿಯನ್ನು ಮಾದ್ಯಮ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ರೈತ ಸಂಪರ್ಕ ಕೇಂದ್ರ, ಗೊಬ್ಬರ ಮಾರಾಟ ಮಳಿಗೆಗಳನ್ನು ತೆರದು ರೈತರಿಗೆ ವಿತರಿಸಲು ಅವಕಾಶ ನೀಡಲಾಗಿದೆ. ಸರಿಯಾದ ಸಮಯಕ್ಕೆ ತೆರಯದೆ ಇರುವ ಅಂಗಡಿಗಳಿಗೆ ಶೋಕಾಸ್ ನೋಟೀಸ್ ನೀಡಿ, ಕ್ರಮಕೈಗೊಳ್ಳಲಾಗುವುದು ಮತ್ತು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ನಕಲಿ ಬೀಜ, ಗೊಬ್ಬರ ಮಾರಾಟ ಹಾಗೂ ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದು ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶಿಲಾ.ಬಿ., ಪ್ರೋಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚಟ್ಟಿ, ಕೃಷಿ ನಿರ್ದೇಶನಾಲಯದ ಸಾವಯವ ವಿಭಾಗದ ಅಪರ ನಿರ್ದೇಶಕ ಜೆ.ವೆಂಕಟರಾಮರೆಡ್ಡಿ ಪಾಟೀಲ ಸೇರಿದಂತೆ ಇತರರು ಇದ್ದರು.
ಜಂಟಿ ಕೃಷಿ ನಿರ್ದೇಶಕ ರಾಜಶೇಖರ .ಐ. ಬಿಜಾಪೂರ ಸ್ವಾಗತಿಸಿ, ಜಿಲ್ಲೆಯ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಕುರಿತು ಸಭೆಗೆ ವಿವರಿಸಿದರು. ಸಭೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಕೆಯ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.