ಕಾಪು ದಾಸ್ತಾನು ಡಿ.ಎ.ಪಿ.ರಸಗೊಬ್ಬರದ ಗುಣಮಟ್ಟ ಪರೀಕ್ಷಿಸಿ, ಬಳಕೆಗೆ ಯೋಗ್ಯವೆಂದು ಖಾತ್ರಿ ಪಡಿಸಿಕೊಂಡು ಮಾರಾಟ ಮಾಡಲಾಗುತ್ತಿದೆ; ರೈತರು ಯಾವುದೇ ಸಂಶಯ, ಸಂದೇಹಕ್ಕೆ ಒಳಗಾಗದೆ ಬಳಸಲಿ:ಜಿಲ್ಲಾಧಿಕಾರಿ ನಿತೇಶ ಪಾಟೀಲ

Share and Enjoy !

Shares

ಧಾರವಾಡ: ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಲ್ಲಿ 2018-19ನೇ ಸಾಲಿನ ಕಾಪು ದಾಸ್ತಾನು ಯೋಜನೆ ಅಡಿಯಲ್ಲಿ ಐಪಿಎಲ್ ಸಂಸ್ಥೆಯ 1960 ಮೆಟ್ರಿಕ್ ಟನ್ ಡಿ.ಎ.ಪಿ. ರಸಗೊಬ್ಬರದ ದಾಸ್ತಾನು ಲಭ್ಯವಿದ್ದು, ಸದರಿ ರಸಗೊಬ್ಬರದ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ನಿಗದಿತ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ಗುಣಮಟ್ಟ ಖಾತ್ರಿ ಪಡಿಸಿಕೊಂಡ ನಂತರವಷ್ಟೆ ತಾಲೂಕಿನ ಸಹಕಾರ ಸಂಘಗಳ ಬೇಡಿಕೆಗೆ ಅನುಗುಣವಾಗಿ ಗೊಬ್ಬರವನ್ನು ಹಂಚಿಕೆ ಮಾಡಲಾಗುತ್ತಿದ್ದು, ರೈತರು ಯಾವುದೇ ಸಂದೇಹ, ಸಂಶಯಕ್ಕೆ ಒಳಗಾಗದೆ ನಿಸಂದೇಹವಾಗಿ ಡಿ.ಎ.ಪಿ. ರಸಗೊಬ್ಬರವನ್ನು ಖರೀದಿಸಿ, ಬೆಳೆಗಳಿಗೆ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ವಿವಿಧ ಕಂಪನಿಯ ವಿವಿಧ ಗ್ರೇಡ್‍ಗಳ ರಸಗೊಬ್ಬರಗಳು ಸಹಕಾರ ಸಂಘ ಹಾಗೂ ಖಾಸಗಿ ಮಾರಟಗಾರರಿಂದ ಮಾರಾಟವಾಗುತ್ತಿದ್ದು, ಕೆಲವು ರೈತರು ನಿರ್ದಿಷ್ಟವಾದ ಕಂಪನಿಯ ರಸಗೊಬ್ಬರಕ್ಕಾಗಿ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.ಆದರೇ ಯಾವುದೇ ಕಂಪನಿಯ ವಿವಿಧ ಗ್ರೇಡ್‍ಗಳ ರಸಗೊಬ್ಬರಗಳನ್ನು ರೈತರು ಖರೀದಿಸಿದಾಗ ನಿರ್ಧಿಷ್ಟವಾದ ಗ್ರೇಡ್‍ನಲ್ಲಿ ಇರುವ ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಾಗಾಗಿ ರೈತರು ಕಾಲಕಾಲಕ್ಕೆ ಸ್ಥಳೀಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿ.ಎ.ಪಿ. ರಸಗೊಬ್ಬರವನ್ನು ಬೆಳೆಗಳಿಗೆ ಬಳಸಬಹುದಾಗಿದೆ. ಎಲ್ಲಾ ಕಂಪನಿಯ ಡಿ.ಎ.ಪಿ. ರಸಗೊಬ್ಬರಗಳಲ್ಲಿ ಸಾರಜನಕ ಶೇ.18 ಹಾಗೂ ರಂಜಕ ಶೇ.46 ಪೋಷಕಾಂಶಗಳು ಇರುತ್ತವೆ. ಆದುದರಿಂದ ರೈತರು ಯಾವುದೇ ಕಂಪನಿಯ ರಸಗೊಬ್ಬರವನ್ನು ಖರೀದಿಸಿ ಬೆಳೆಗಳಿಗೆ ನೀಡಿದರೂ ಒಂದೇ ಪ್ರಮಾಣದ ಪೋಷಕಾಂಶಗಳು ಬೆಳೆಗಳಿಗೆ ಲಭ್ಯವಾಗಲಿವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share and Enjoy !

Shares