ಕಂಪ್ಲಿ: ಪಟ್ಟಣದ 22ನೇ ವಾರ್ಡಿನ ಎಂಡಿಕ್ಯಾಂಪಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ, ಜೈ ಭೀಮ ಯುವ ಜನ ಶಕ್ತಿ ಸಂಘದ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಗೌಸಿಯಾಬೇಗಂಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಜೈ ಭೀಮ ಯುವ ಜನ ಶಕ್ತಿ ಸಂಘದ ಕಂಪ್ಲಿ ತಾಲೂಕು ಘಟಕ ಅಧ್ಯಕ್ಷ ಪಿ.ರಾಜ ಮಾತನಾಡಿ, ಕಳೆದ ವರ್ಷದಿಂದ ಕೊರೋನಾ ಹೆಮ್ಮಾರಿಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಷ್ಟಕರವಾಗಿದೆ. ಈ ಬಾರಿಯ ಕೊರೋನಾ ಎರಡನೇ ಅಲೆಯಿಂದಾಗಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಿದೆ. ಈ ಲಾಕ್ಡೌನ್ ಸಮಯದಲ್ಲಿ ಇಲ್ಲಿನ 22ನೇ ವಾರ್ಡಿನ ಆಶ್ರಯ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟದಿಂದ ಸಾಕಷ್ಟು ಜನರು ಬೀದಿಗೆ ಬರುವಂತಾಗಿದೆ. ಈ ಲಾಕ್ಡೌನ್‌ನಲ್ಲಿ ದುಡಿಮೆ ಇಲ್ಲದೆ ಜನರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ರಾಜರೋಷವಾಗಿ ನಡೆಯುತ್ತಿದೆ. ಇದರಿಂದ ಮದ್ಯಪ್ರಿಯರು ಅಕ್ರಮ ಮದ್ಯದ ಕುಡಿತಕ್ಕೆ ಒಳಗಾಗುವ ಜತೆಗೆ ಸಾಲ ಸೂಲ ಮಾಡಿ ಮದ್ಯ ಸೇವಿಸುವುದರಿಂದ ಕುಟುಂಬಗಳ ಬದುಕು ಸಂಕಷ್ಟಗಳಿಗೆ ಸಿಲುಕುವಂತಾಗಿದೆ. ಲಾಕ್ಡೌನ್ ಒಂದು ಕಡೆಯಾದರೆ, ಮತ್ತೊಂದು ಕಡೆ ಇಲ್ಲಿನ ಅಕ್ರಮ ಮದ್ಯದಿಂದ ಜನರ ಬದುಕು ಕ್ಲಿಷ್ಟಕರವಾಗಿ ಬಿಟ್ಟಿದೆ. ಇಲ್ಲಿನ ಅಕ್ರಮ ಮದ್ಯ ಮಾರಾಟದಿಂದ ಕುಡುಕರ ಹಾವಳಿಗೆ ಮಹಿಳೆಯರು ತಿರುಗಾಡುವದಕ್ಕ್ಕೆ ಭಯಪಡುವಂತಾಗಿದೆ. ಅಕ್ರಮ ಮದ್ಯದಿಂದ ಇಲ್ಲಿ ಹೆಚ್ಚಿನ ಜನರು ಸೇರುವುದಕ್ಕೆ ಅನುವು ಮಾಡಿಕೊಟ್ಟಂತಾಗುತ್ತಿದೆ. ಇದರಿಂದ ರೋಗ ರುಜಿನಗಳಿಗೆ ತುತ್ತಾಗುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಆಶ್ರಯ ಕಾಲೋನಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಿ, ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ಗಂಗಣ್ಣ, ಹಿರಿಯ ಮುಖಂಡ ಆರ್.ನರಸಪ್ಪ, ಹನುಮಣ್ಣ, ಕೆ.ಬಾಲಪ್ಪ, ಉಮೇಶ್, ಗಂಗರಾಜ, ಕಾಳಿಂಗ, ಸ್ವಾಮಿದಾಸ್, ಬಿ.ಉಮೇಶ್, ಶಿವಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.