ವಿಜಯನಗರ ವಾಣಿ : ಬಸಲಿಂಗಪ್ಪ ಭಜಂತ್ರಿ
ಲಿAಗಸುಗೂರು : ಶಿಕ್ಷಣ ಇಲಾಖೆಯ ನಿರ್ದೇಶನವಿಲ್ಲದಿದ್ದರೂ ಸ್ಥಳೀಯ ವಿಸಿಬಿ ಕಾಲೇಜಿನಲ್ಲಿ ಅಕ್ರಮವಾಗಿ ಪಿಯು ವಿದ್ಯಾರ್ಥಿಗಳಿಂದ ಶುಲ್ಕ ವಸೂಲು ಮಾಡಲಾಗುತ್ತಿದ್ದು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪಾಲಕರಲ್ಲಿ ಅಸಮಧಾನ ಕೇಳಿ ಬರುತ್ತಿದೆ.
ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಇದ್ದರೂ ಅವರನ್ನು ಕಡ್ಡಾಯವಾಗಿ ಪಾಸ್ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದರೆ, ಹೆಚ್ಚುವರಿ ಅಂಕಗಳು ಬೇಕಾದಲ್ಲಿ ಅಸೈನ್‌ಮೆಂಟ್ ಬರೆದುಕೊಡಬೇಕೆಂದು ನಿಯಮವನ್ನು ರೂಪಿಸಿದೆ.
ಮನೆಯಲ್ಲಿಯೇ ಕುಳಿತುಕೊಂಡು ಮೊಬೈಲ್‌ನಲ್ಲಿ ಆಪ್ ಡೌನ್‌ಲೋಡ್ ಮಾಡುವ ಮೂಲಕ ಬರೆದು ಕಳಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿರುವ ಸ್ಥಳೀಯ ವಿಸಿಬಿ ಶಿಕ್ಷಣ ಸಂಸ್ಥೆಯವರು ವಿದ್ಯಾರ್ಥಿಗಳಿಂದ ಅಕ್ರಮವಾಗಿ ಶುಲ್ಕ ವಸೂಲು ಮಾಡುವ ಕ್ರಮ ಖಂಡನೀಯವಾಗಿದೆ. ಈ ಕಾಲೇಜಿನಲ್ಲಿ ಸುಮಾರು ೫೦೦ ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆನ್ನಲಾಗುತ್ತಿದೆ. ಇವರಿಂದ ಕಡ್ಡಾಯವಾಗಿ ಶುಲ್ಕ ವಸೂಲಿಗೆ ಇಳಿದ ಶಿಕ್ಷಣ ಸಂಸ್ಥೆಯ ಕ್ರಮಕ್ಕೆ ಸಾರ್ವಜನಿಕರಲ್ಲಿ ಆಕ್ರೋಶಗಳು ವ್ಯಕ್ತವಾಗಿವೆ.
ಸ್ಥಳಕ್ಕೆ ಪತ್ರಿಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಪ್ರಭುಗೌಡ, ನಮ್ಮಿಂದ ತಪ್ಪಾಗಿದೆ ಎಂದು ತಡವರಿಸುತ್ತಾ ಕ್ಷಮೆ ಕೋರಲು ಮುಂದಾದರು. ಆದರೆ, ವಿದ್ಯಾರ್ಥಿಗಳಿಂದ ಮಾತ್ರ ಹೆಚ್ಚುವರಿಯಾಗಿ ಅಕ್ರಮ ಶುಲ್ಕ ವಸೂಲು ಮಾಡುತ್ತಿರುವುದು ಮಾತ್ರ ದುರಂತವೇ ಸರಿ.
‘ಪಿಯು ವಿದ್ಯಾರ್ಥಿಗಳಿಂದ ಅಕ್ರಮವಾಗಿ ಶುಲ್ಕ ವಸೂಲು ಮಾಡುತ್ತಿರುವ ವಿಸಿಬಿ ಕಾಲೇಜಿನ ಕ್ರಮ ಖಂಡನೀಯ. ಶಿಕ್ಷಣ ಇಲಾಖೆಯ ನಿಯಮಗಳನ್ನು ಮೀರಿಯೂ ವಿಸಿಬಿ ಕಾಲೇಜಿನಲ್ಲಿ ನಿಯಮಬಾಹಿರವಾಗಿ ಶುಲ್ಕ ಪಡೆಯುತ್ತಿರುವುದರ ವಿರುದ್ಧ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಕೂಡಲೇ ಮೇಲಧಿಕಾರಿಗಳು ಪರಿಶೀಲನೆ ಮಾಡಿ ಕಠಿಣ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಕಾಲೇಜು ಬಳಿ ಪ್ರತಿಭಟನೆ ಮಾಡಲಾಗುವುದು.’ – ಜಿಲಾನಿಪಾಷಾ, ಕರವೇ ಅದ್ಯಕ್ಷ.