ಸಿರುಗುಪ್ಪ:ಗ್ರಾಮಗಳಲ್ಲಿ ನೈರ್ಮಲ್ಯತೆ ಕಾಪಾಡುವ ಉದ್ದೇಶದಿಂದ ಸರ್ಕಾರವು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪನೆ ಮಾಡುತ್ತಿದ್ದು, ಮನೆ ಮನೆಗೆ ಕಸ ಸಂಗ್ರಹಿಸಲು ಕಸ ವಿಲೇವಾರಿ ವಾಹನ ಬರುತ್ತದೆ, ಅದರಲ್ಲಿಯೇ ಪ್ರತಿಯೊಬ್ಬರು ಕಸವನ್ನು ಹಾಕಬೇಕೆಂದು ಶಾಸಕ ಎಂ.ಎಸ್.ಸೋಮಲಿAಗಪ್ಪ ತಿಳಿಸಿದರು.
ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಸ್ವಚ್ಛಭಾರತ್ ಅಭಿಯಾನ ಯೋಜನೆಯಡಿಯಲ್ಲಿ ರೂ.೧೨ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿ ಮಾತನಾಡಿ ಇಂದು ಯಾವುದೇ ಗ್ರಾಮಕ್ಕೆ ತೆರಳಿದರೂ ಕಸದ ರಾಶಿ ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್ ಕಸವು ಹೆಚ್ಚಾಗಿ ಕಂಡುಬರುತ್ತಿದೆ, ಪ್ಲಾಸ್ಟಿಕ್ ಕಸವು ಭೂಮಿಗೆ ಮಾರಕವಾಗಿರುತ್ತದೆ, ಪ್ಲಾಸ್ಟಿಕ್ ಭೂಮಿ ಸೇರಿದರೆ ಅದು ನೂರಾರು ವರ್ಷವಾದರೂ ಕೊಳೆಯುವುದಿಲ್ಲ, ಆದ್ದರಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್ ಕವರ್‌ಗಳ ಬಳಕೆಯನ್ನು ಕಡಿಮೆ ಮಾಡಬೇಕು, ಎಲ್ಲಾ ಕಾರ್ಯಗಳಿಗೂ ಬಟ್ಟೆ ಅಥವಾ ಕಾಗದದ ಚೀಲಗಳನ್ನು ಬಳಸಿದರೆ ಭೂಮಿಗೆ ಪ್ಲಾಸ್ಟಿಕ್ ತ್ಯಾಜ್ಯ ಸೇರುವುದು ಕಡಿಮೆಯಾಗುತ್ತದೆ ಎಂದು ಹೇಳಿದರು.
ತಾ.ಪಂ.ಇ.ಒ. ಶಿವಪ್ಪ ಸುಬೇದಾರ್, ತಾ.ಪಂ.ಸದಸ್ಯ ಕೋರಿಪಿಡ್ಡಯ್ಯ, ಪಿ.ಡಿ.ಒ. ನಾಗಮಣಿ, ಗ್ರಾ.ಪಂ.ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.