ಸಿರುಗುಪ್ಪ: ತಾಲೂಕಿನ ಹಳೇಕೋಟೆ-೬೪ ಗ್ರಾಮದ ಬಳಿ ಹೆದ್ದಾರಿ೧೫೦-ಎ ನಲ್ಲಿ ಬಳ್ಳಾರಿ ಕಡೆ ಸಾಗುತ್ತಿದ್ದ ಎ.ಪಿ.೨೧ ಕ್ಯೂ ೮೩೫೭ ಸಂಖ್ಯೆಯ ಟಾಟಾ ಇಂಡಿಗೋ ಕಾರು ಅತೀವೇಗದಿಂದ ಚಲಿಸುತ್ತಿರುವಾಗ ಏಕಾಏಕಿಯಾಗಿ ಎಡಗಡೆಯಿಂದ ಬಲಗಡೆ ತಿರುಗಿ, ರಸ್ತೆ ಬದಿ ಮರದ ಹತ್ತಿರ ತರಕಾರಿ ಮಾರುತ್ತಿದ್ದವರ ಮೆಲೆ ಹರಿಹಾಯ್ದ ಕಾರಣ
೪೫ವರ್ಷದ ಶಾಂತಮ್ಮ ಎಂಬುವ ಮಹಿಳೆ ಸ್ಥಳದಲ್ಲೇ ಮರಣ ಹೊಂದಿದ್ದು ಒಟ್ಟು ಆರು ಜನಕ್ಕೆ ಗಾಯಗಳಾಗಿರುವ ದುರ್ಘಟನೆ ಭಾನುವಾರ ಬೆಳಿಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಸೀಮಾಂಧ್ರದ ನದಿಚಾಗಿ ಗ್ರಾಮದ ಬಸವರಾಜ, ಮ್ಯಾಳೂರು ಗ್ರಾಮದ ನರಸಿಂಹ ಮತ್ತು ಚಾಲಕ ಗಾದಿಲಿಂಗ ಇವರುಗಳು ತಾಲೂಕಿನ ದಾಸಪುರ ಗ್ರಾಮದಲ್ಲಿನ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆಯೆಂದು ತಿಳಿದು ಬಂದಿದೆ.
ಸಿರುಗುಪ್ಪ ನಗರದ ೧೬ನೇ ವಿಭಾಗದ ನಿವಾಸಿಗಳು ರಸ್ತೆಯಂಚಿನಲ್ಲಿ ತರಕಾರಿ ಖರಿದಿಸುವಲ್ಲಿ ಮಗ್ನರಾಗಿದ್ದಾಗ ಕಾರು ಡಿಕ್ಕಿ ಹೊಡೆದದ್ದರಿಂದ ಅವರುಗಳಿಗೆ ರಕ್ತಗಾಯಗಳಾಗಿವೆ. ಕಾರಿನಲ್ಲಿದ್ದ ನರಸಿಂಹ ತೀವ್ರವಾಗಿ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ. ಚಾಲಕ ಗಾದಿಲಿಂಗನ ಜೊತೆ ಅಂಬುಲೆನ್ಸ್ ವಾಹನದಲ್ಲಿ ಬಳ್ಳಾರಿ ವಿಮ್ಸ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ. ಸಿ.ಪಿ.ಐ. ಕಾಳಿಕೃಷ್ಣ, ಪಿ.ಎಸ್.ಐ. ಶಿವುಕುಮಾರ ನಾಯ್ಕ ಇವರುಗಳು ಸಿಬ್ಬಂದಿಗಳೊಡನೆ ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.