ವಿಜಯನಗರವಾಣಿ ಸುದ್ದಿ
ಕಂಪ್ಲಿ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತು ರೈತರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಜತೆಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದ ಗ್ರಾಪಂ ಮುಂದೆ ವಾಹನ ಪ್ರಚಾರದ ಜತೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಕರಪತ್ರಗಳನ್ನು ಬಿತ್ತರಿಸಿದ ನಂತರ ಮಾತನಾಡಿ, 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುμÁ್ಠನಗೊಂಡಿದ್ದು, ವ್ಯಾಪ್ತಿಗೆ ಒಳಪಡುವ ಬೆಳೆಗಳಿಗೆ ವಿಮೆ ಮಾಡಿಸಲು ರೈತರು ಕೃಷಿ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದು, ಬೆಳೆ ವಿಮೆ ಮಾಡಿಸಬೇಕು. ‘ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳು ರೈತರಿಗೆ ಸಮರ್ಪಕವಾಗಿ ದೊರೆತಿವೆ. ಆದರೆ, ಬರುವ ದಿನಗಳಲ್ಲಿ ಪ್ರಕೃತಿ ವಿಕೋಪ, ಕೀಟ ಅಥವಾ ರೋಗ ಬಾಧೆಯಿಂದ ಬೆಳೆ ವಿಫಲವಾದ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೆರವಾಗಲಿದೆ’ ಕಂಪ್ಲಿ ತಾಲೂಕಿನಲ್ಲಿರುವ ನೀರಾವರಿ, ಮಳೆ ಆಶ್ರಿತ ಪ್ರದೇಶದ ರೈತರು ಬೆಳೆ ವಿಮೆ ಮಾಡಿಸುವ ಮೂಲಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು. ಕಂಪ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ತೆರಳಿ, ವಾಹನ ಮುಖಾಂತರ ಹಾಗೂ ಕರಪತ್ರಗಳ ಹಂಚಿಕೆಯೊಂದಿಗೆ ಬೆಳೆ ವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಿಡಿಒ ಸಾವಿತ್ರಿ ಗೌರೋಜಿ, ಗ್ರಾಪಂ ಸದಸ್ಯ ವೆಂಕೋಬ ನಾಯಕ, ರೈತ ಮುಖಂಡರಾದ ನಾಗೇಂದ್ರಪ್ಪ, ಪಕ್ಕೀರಪ್ಪ, ದೇವರಾಜ, ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೇಣುಕಾರಾಜ ಸೇರಿ ಇಟಗಿ, ಅರಳಳ್ಳಿ ಹಾಗೂ ಹಳ್ಳಿ ಭಾಗದ ರೈತರು ಪಾಲ್ಗೊಂಡಿದ್ದರು.